ಕನ್ನಡ ಕಲಿಕೆಯಿಂದ ಉದ್ಯೋಗಾವಕಾಶ Kannada

Kannada
ತರೀಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ  ಎಂ.ಎಸ್.ಗೀತಾ ಮಾತನಾಡಿದರು. ಡಾ. ಟಿ.ಮಂಜುನಾಥ, ಡಾ. ಕಿರಣ್, ಡಾ. ಶಿವರುದ್ರಪ್ಪ, ಡಾ. ಲಾವಣ್ಯ ಇತರರಿದ್ದರು.
ತರೀಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಎಂ.ಎಸ್.ಗೀತಾ ಮಾತನಾಡಿದರು. ಡಾ. ಟಿ.ಮಂಜುನಾಥ, ಡಾ. ಕಿರಣ್, ಡಾ. ಶಿವರುದ್ರಪ್ಪ, ಡಾ. ಲಾವಣ್ಯ ಇತರರಿದ್ದರು.
Published on: 

ತರೀಕೆರೆ: ಕನ್ನಡ ಭಾಷಾ ಕಲಿಕೆಯಿಂದ ಭವಿಷ್ಯವಿಲ್ಲ ಎನ್ನುವುದು ತಪ್ಪು ಎಂದು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಆರ್‌ಐಇಯು) ಪ್ರಾಧ್ಯಾಪಕ ಡಾ. ಪ್ರವೀಣ್‌ಕುಮಾರ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ಞಾನ ಹಾಗೂ ಕೌಶಲದೆಡೆಗಿನ ಉದಾಸೀನತೆ ನಿರುದ್ಯೋಗ ಸಮಸ್ಯೆಗೆ ಕಾರಣ. ಯುವ ಪೀಳಿಗೆ ನಿರ್ಲಕ್ಷೃ ಭಾವ ತೊರೆದರೆ, ಭಾಷೆ ಮತ್ತು ಕನ್ನಡ ಜನತೆಯ ಉದ್ಧಾರ ಸಾಧ್ಯ ಎಂದರು.

ಕನ್ನಡ ಕಲಿಕೆಯಿಂದ ಸಿಗುವ ಉದ್ಯೋಗಾವಕಾಶಗಳ ಪಟ್ಟಿ ದೊಡ್ಡದಿದೆ. ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ, ಕಿರುತೆರೆಯಲ್ಲಿ ನಿರೂಪಕರು, ವಾರ್ತಾ ವಾಚಕರಷ್ಟೇ ಅಲ್ಲ, ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವವರೇ ಇದಕ್ಕೆ ಸಾಕ್ಷಿ. ಇಂಥ ಉದಾಸೀನ, ಕೀಳರಿಮೆ ಬಿಟ್ಟು ಕನ್ನಡ ಭಾಷೆಯ ಸರಿಯಾದ ಅರಿವು ಹಾಗೂ ಅದರ ಕೌಶಲಯುತ ಬಳಕೆಯಿಂದ ವಿದ್ಯಾರ್ಥಿಗಳು ಸ್ವಾವಲಂಬಿಯಾಗಬೇಕು ಎಂದು ಹೇಳಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಎಂ.ಎಸ್.ಗೀತಾ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ ಅದೊಂದು ನೆಲ, ಜಲ, ಸಂಸ್ಕೃತಿ ಮಿಲನಗೊಂಡ ಜೀವನ ವಿಧಾನವಾಗಿದೆ. ಕನ್ನಡವನ್ನು ಅನ್ನದ ಭಾಷೆಯಾಗಿಯೂ ಮಾಡಿಕೊಳ್ಳುವುದು ನಮ್ಮ ಆಸಕ್ತಿ, ಶ್ರದ್ಧೆ ಮತ್ತು ಪ್ರಯತ್ನವನ್ನು ಅವಲಂಬಿಸಿದೆ. ಸಾಮಾಜಿಕ ಮಾಧ್ಯಮಗಳತ್ತ ಆಕರ್ಷಿತರಾಗುತ್ತಿರುವ ಯುವಸಮೂಹ ತಾಯಿ ನಾಡನ್ನು ಉಪೇಕ್ಷೆ ಮಾಡುತ್ತಿರುವುದು ಕಳವಳಕಾರಿ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಚಾರ್ಯ ಡಾ. ಟಿ.ಮಂಜುನಾಥ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹಿಂದೆಂದಿಗಿಂತಲೂ ಹೆಚ್ಚು ಕ್ರಿಯಾಶೀಲರಾಗುವ ಅಗತ್ಯವಿದೆ ಎಂದರು. ಡಾ. ಕಿರಣ್, ಡಾ. ಶಿವರುದ್ರಪ್ಪ, ಡಾ. ಲಾವಣ್ಯ, ದತ್ತಾತ್ರೇಯ, ಗೀತಾ ಮತ್ತಿತರರಿದ್ದರು.