

ಕಡೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಮಂಗಳವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಕೆ.ಮಂಜುನಾಥ್ ಮಾತಿನ ಮೂಲಕ ಚಿಕಿತ್ಸೆ ನೀಡಿದರು.
ಸಾರ್ವಜನಿಕ ಆಸ್ಪತ್ರೆ ಪ್ರಯೋಗಾಲಯದ ಸಿಬ್ಬಂದಿ ನಿಗದಿತ ಸಮಯಕ್ಕೆ ಸೇವೆ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವುದರ ಕುರಿತು ವಿಜಯವಾಣಿ ಸೆ.25ರಂದು ‘ಸೌಲಭ್ಯವಿದ್ದರೂ ಸೇವೆಗೆ ನಿರ್ಲಕ್ಷ’ ಶೀರ್ಷಿಕೆಯ ಪ್ರಕಟಿಸಿದ ವರದಿ ಪರಿಣಾಮ ಮಂಗಳವಾರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ ನಡೆಸಿದರು.
ಪ್ರಯೋಗಾಲಯದ ಕೊಠಡಿ ಎದುರು ರಕ್ತ ಪರೀಕ್ಷೆಗೆ ಸರತಿ ಸಾಲಿನಲ್ಲಿ ನಿಂತ ರೋಗಿಗಳ ಸಾಲಿನಲ್ಲಿ ನಿಂತು ಸಿಬ್ಬಂದಿ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರು. ಕೊಠಡಿ ಬಳಿ ತಪಾಸಣೆಗೆ ನಿಂತು ಹತ್ತು ನಿಮಿಷ ಕಳೆದರೂ ಸರತಿ ಸಾಲಿನಲ್ಲಿ ನಿಂತ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸದೆ ಲ್ಯಾಬ್ ಕೊಠಡಿಯಲ್ಲಿ ನಾಲ್ಕೈದು ಸಿಬ್ಬಂದಿ ಇದ್ದರೂ ನಿರ್ಲಕ್ಷದಿಂದ ವರ್ತಿಸುತ್ತಿರುವುದನ್ನು ಕಂಡು ಪ್ರಯೋಗಾಲಯದ ತಾಂತ್ರಿಕ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ರೋಗಿಗಳ ಭಾವನೆ ಅರ್ಥಮಾಡಿಕೊಂಡು ಸೌಜನ್ಯದಿಂದ ನಡೆಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಬಹುತೇಕ ಬಡವರು ಬರುತ್ತಾರೆ. ರೋಗಿಗಳ ಆರೈಕೆಗಾಗಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತದೆ. ಅವರಿಗೆ ಆರೋಗ್ಯ ಸೇವೆ ಒದಗಿಸುವುದು ವೈದ್ಯರ ಮತ್ತು ಸಿಬ್ಬಂದಿ ಆದ್ಯ ಕರ್ತವ್ಯ. ರೋಗಿಗಳ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಂದು ತಾಕೀತು ಮಾಡಿದರು.
ರಕ್ತ ಪರೀಕ್ಷೆಗೆ ಬಂದ ರೋಗಿಗಳನ್ನು ಕೊಠಡಿ ಮುಂದೆ ವಿನಾಕಾರಣ ಕಾಯಿಸಬೇಡಿ. ರಕ್ತ ಪರೀಕ್ಷೆ ವರದಿ ನೀಡುವ ಸಮಯದ ಮಾಹಿತಿ ನೀಡಿ. ಪ್ರತಿನಿತ್ಯ ನಡೆಸುವ ಪರೀಕ್ಷೆಯ ವರದಿಗಳನ್ನು ಸಂಬಂಧಿಸಿದವರಿಗೆ ಅಪ್ಡೇಟ್ ಮಾಡಿ ಎಂದು ನಿರ್ದೇಶನ ನೀಡಿದರು.
ಆಸ್ಪತ್ರೆಯ ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಮಯದ ಮಹತ್ವ ಅರಿತು ಮಾನವೀಯ ದೃಷ್ಟಿಯಲ್ಲಿ ಕರ್ತವ್ಯ ನಿರ್ವಹಿಸಿ. ಮುಖ್ಯವಾಗಿ ಕಡೂರು ಆಸ್ಪತ್ರೆಗೆ ಪ್ರತಿ ಮಂಗಳವಾರ ಮತ್ತು ಶನಿವಾರ ಫೆಥಾಲಿಜಿಸ್ಟ್ ವೈದ್ಯರನ್ನು ನಿಯೋಜಿಸಲಾಗಿದೆ. ಗಂಭೀರ ರಕ್ತ ಮಾದರಿಯ ತಪಾಸಣೆಗಳಿಗೆ ಹೆಚ್ಚು ಉಪಯುಕ್ತವಾಗಲಿದೆ. ಪ್ರಯೋಗಾಲಯದ ಕಾರ್ಯವೈಖರಿ ವೇಗಪಡೆದುಕೊಳ್ಳಬೇಕು. ಮತ್ತೆ ನಿರ್ಲಕ್ಷ್ಯ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ವಿಜಯವಾಣಿಯೊಂದಿಗೆ ಮಾಹಿತಿ ಹಂಚಿಕೊಂಡರು.
ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎನ್.ಉಮೇಶ್, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚಂದಾ, ಪ್ರಯೋಗಾಲಯದ ತಾಂತ್ರಿಕ ಅಧಿಕಾರಿ ರವಿನಾಯ್ಕ, ದಾದಿಯರು ಮತ್ತು ಸಿಬ್ಬಂದಿ ಇದ್ದರು.