

ಬೀರೂರು: ಜೋಡಿತಿಮ್ಮಾಪುರ ಗ್ರಾಮ ಪಂಚಾಯಿತಿ ಇಂಗ್ಲಾರನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವ ನೆಪಒಡ್ಡಿ ನೀರಿನ ಸಂಗ್ರಹ ಘಟಕಗಳನ್ನು ತೆರವು ಮಾಡಿರುವುದು ಒಂದೆಡೆಯಾದರೆ, ನೀರಿನ ಕಂದಾಯ ಪಾವತಿಸಿಲ್ಲ ಎಂಬ ಕಾರಣಕ್ಕೆ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆ ಕಡಿತಗೊಳಿಸಿರುವ ಅಧಿಕಾರಿಗಳು ಬರದ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಿದ್ದಾರೆ.
ಗ್ರಾಮದಲ್ಲಿ 50 ಮನೆಗಳು ಇದ್ದು, 200 ಜನಸಂಖ್ಯೆ ಇದೆ. ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ಎರಡು ಕೊಳವೆಬಾವಿಗಳಿದ್ದು ಅದರಲ್ಲಿ ಒಂದು ಕೊಳವೆಬಾವಿ ಮಳೆ ಕೊರತೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಒಂದು ಕೊಳವೆಬಾವಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಅದರಿಂದ ಎರಡು ಮಿನಿ ಟ್ಯಾಂಕ್‌ಗಳಿಗೆ ನೀರು ತುಂಬಿಸಿ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ ಒಂದು ತಿಂಗಳ ಹಿಂದೆ ಸಮುದಾಯ ಭವನ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿದ್ದಂತೆ ಎರಡು ಮಿನಿ ಟ್ಯಾಂಕ್‌ಗಳನ್ನು ಕೆಡವಿದ್ದಾರೆ. ಇದರಿಂದಾಗಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಟ್ಯಾಂಕ್‌ಗಳನ್ನು ತೆರವುಗೊಳಿಸುವ ಮೊದಲು ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಸದ್ಯ ಗ್ರಾಮದ ಎರಡು ಭಾಗಗಳಲ್ಲಿ ನೀರಿನ ಪೂರೈಕೆ ಮಾಡಲಾಗುತ್ತಿದ್ದು, ಗ್ರಾಮಸ್ಥರು ಕೆಲಸ ಬಿಟ್ಟು ನೀರಿಗಾಗಿ ಕಾದು ಕೂರಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ.
ಇನ್ನು ಜಲ ಜೀವನ್ ಯೋಜನೆಯಿಂದ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಿ ವರ್ಷಗಳೇ ಕಳೆದಿದೆ. ಮೂರು ತಿಂಗಳ ಹಿಂದೆ 15 ಸಾವಿರ ಲೀಟರ್ ಸಾಮರ್ಥ್ಯದ ಸಂಗ್ರಹಣ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ಆ ಟ್ಯಾಂಕ್ ಅಥವಾ ನಲ್ಲಿಗಳಿಂದ ಇಲ್ಲಿಯವರೆಗೆ ಹನಿ ನೀರೂ ಬಂದಿಲ್ಲ. ಇಂಥ ಅವ್ಯವಸ್ಥೆ ನಡುವೆ ವಿವಿಧ ಬಡಾವಣೆಗಳಲ್ಲಿ ನೀರಿನ ಕಂದಾಯ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ನೋಟಿಸ್ ನೀಡಲಾಗಿದ್ದು, ಕಂದಾಯ ಪಾವತಿಸಿದರೆ ಮಾತ್ರ ಕುಡಿಯುವ ನೀರು ಪೂರೈಸಲಾಗುವುದು ಎನ್ನುವ ಗ್ರಾಪಂ ಅಧಿಕಾರಿಗಳ ದಿಟ್ಟ ನಿಲುವಿನಿಂದ ಜನ ಸಿಡಿಮಿಡಿಗೊಂಡಿದ್ದಾರೆ. ಕಂದಾಯದ ಹಣ ಹೊಂದಿಸುವಲ್ಲಿ ಇನ್ನಷ್ಟು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಇದರಿಂದ ಈಗಾಗಲೇ ನೀರಿನ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಮತ್ತಷ್ಟು ತೊಂದರೆಯಾಗಿದೆ.
ಕೆಲವು ಕುಟುಂಬಗಳು ಕಂದಾಯ ಬಾಕಿ ಇರುವ ಬಗ್ಗೆ ಸಮರ್ಪಕ ಮಾಹಿತಿ ಅಥವಾ ನೋಟಿಸ್ ದೊರೆಯಲಿಲ್ಲ ಎಂದು ಹೇಳಿದ್ದಾರೆ. ಬಾಕಿ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಬಡ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಾನವೀಯ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.