ಎನ್.ಆರ್.ಪುರ ಸಂಪೂರ್ಣ ಸ್ತಬ್ಧ

NRpur is completely quiet
ಎನ್.ಆರ್.ಪುರದಲ್ಲಿ ಬಂದ್‌ನಿಂದ ರಸ್ತೆ ಬಿಕೋ ಎನ್ನುತ್ತಿತ್ತು.
ಎನ್.ಆರ್.ಪುರದಲ್ಲಿ ಬಂದ್‌ನಿಂದ ರಸ್ತೆ ಬಿಕೋ ಎನ್ನುತ್ತಿತ್ತು.
Published on: 

ಎನ್.ಆರ್.ಪುರ: ಹೆನ್ನಂಗಿ ಗ್ರಾಮದಲ್ಲಿ ಬುಧವಾರ ಕಾಡಾನೆ ದಾಳಿಯಿಂದ ರೈತ ಕೃಷ್ಣಮೂರ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಗುರುವಾರ ಕರೆ ನೀಡಿದ್ದ ಬಂದ್‌ಗೆ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು.

ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಸಹಕಾರ ನೀಡುವಂತೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪದಾಧಿಕಾರಿಗಳು ಬುಧವಾರ ರಾತ್ರಿಯೇ ಕೋರಿದ್ದರು. ಇದರಿಂದಾಗಿ ಗುರುವಾರ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. ಬ್ಯಾಂಕ್‌ಗಳು, ಶಾಲೆಗಳು, ಸರ್ಕಾರಿ ಕಚೇರಿಗಳು, ಔಷಧ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸಿದವು. ಬಸ್ ಸಂಚಾರವಿತ್ತು. ಆದರೆ ಇತರ ವಾಹನಗಳ ಸಂಚಾರ ವಿರಳವಾಗಿದ್ದು, ಪಟ್ಟಣ ಬಿಕೋ ಎನ್ನುತ್ತಿತ್ತು.

ಅಳೇಹಳ್ಳಿಯಲ್ಲಿ ರೈತರು ಕೃಷ್ಣಮೂರ್ತಿ ಅವರ ಮೃತದೇಹವನ್ನು ಇಟ್ಟು, ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಮೃತದೇಹವನ್ನು ತಾಲೂಕಿನ ಬಿ.ಎಚ್.ಕೈಮರಕ್ಕೆ ತಂದು ಪ್ರತಿಭಟನೆ ಮಾಡಲು ವಾಟ್ಸ್‌ಆ್ಯಪ್ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ಕರೆ ನೀಡಲಾಗಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಅಳೇಹಳ್ಳಿ ರಸ್ತೆ ಮಧ್ಯೆಯೇ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಡಿಸಿ, ಎಸ್ಪಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ, ಜೆಡಿಎಸ್, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪ್ರತಿಭಟನೆಗೆ ಸಾಥ್ ನೀಡಿದರು.