

ಬೀರೂರು: ಇಟ್ಟರಾಮನ ಬಾಣಕ್ಕೆ ಹುಸಿಯಿಲ್ಲ. ಸೃಷ್ಟಿಗೆ ನಾಡು ಸಿರಿಯಾಯಿತು. ಮದಗಜಗಳು ಕಾದಾಡಿದರು. ಕತ್ತಲೆಯ ದೀಪಕ್ಕೆ ಬೆಳಕಾಯಿತು. ಸರ್ವರೂ ಎಚ್ಚರದಿಂದರಬೇಕು ಎಂಬ ಕಾರ್ಣಿಕ ನುಡಿಯನ್ನು ನುಡಿದಿದ್ದಾರೆ.
ಬೀರೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದಸರಾ ಕಾರ್ಣಿಕದ ನುಡಿಮುತ್ತುಗಳು ಬುಧವಾರ ಬೆಳಗಿನ ಜಾವ 4.30ಕ್ಕೆ ಜರುಗಿತು.
ವಿಜಯದಶಮಿ ಸಡಗರ ನಡುವೆ ಸಂಪ್ರದಾಯದಂತೆ ಸರಸ್ವತಿಪುರಂ ಬಡಾವಣೆಯಲ್ಲಿ ವರ್ಷವೂ ಕಾರ್ಣಿಕದ ಭವಿಷ್ಯ ನಡೆಯುತ್ತದೆ. ಕಾರ್ಣಿಕದ ದೈವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ಮಂಗಳವಾರ ರಾತ್ರಿ 8 ಗಂಟೆಗೆ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ದೇವಾಲಯದ ಬಳಿಯಿಂದ ರಾತ್ರಿ ಹೊರಟು ಬೀರೂರು ಸಮೀಪದ ಗಾಳಿಹಳ್ಳಿ ಬಳಿಯ ಪಾದದಕೆರೆಯ ಬಳಿ ಇರುವ ಸ್ವಾಮಿಯ ಪಾದಗಳನ್ನು ಪೂಜಿಸಿದ ಭಕ್ತರು ಸ್ವಾಮಿಗೆ ಗಣಂಗಳ ಸೇವೆ ಮತ್ತು ಗೊರವಪ್ಪರೊಂದಿಗೆ 101 ದೋಣಿ ಸೇವೆ ಎಡೆ ಸಲ್ಲಿಸಿ ಬಳಿಕ ಬನ್ನಿ ಮುಡಿದು ಮೆರವಣಿಗೆಯಲ್ಲಿ ಮಹಾನವಮಿ ಬಯಲಿಗೆ ಬುಧವಾರ ನಸುಕಿನ ಜಾವ 4 ಗಂಟೆ ವೇಳೆಗೆ ಆಗಮಿಸಿದರು.
ಆ ವೇಳೆಗಾಗಲೇ ಆದಿದೈವ ಶ್ರೀ ವೀರಭದ್ರಸ್ವಾಮಿ, ಹುಲುಬೆಂಕಿ ಬೀರಲಿಂಗೇಶ್ವರಸ್ವಾಮಿ ಮತ್ತು ಹಿರಿಯಂಗಳದ ವೀರಭದ್ರಸ್ವಾಮಿ ದೇವರ ಉತ್ಸವ ಮೂರ್ತಿಗಳು ಮಹಾನವಮಿ ಬಯಲಿನಲ್ಲಿ ಸ್ಥಾಪಿತಗೊಂಡಿದ್ದವು. ಶ್ರೀ ಮೈಲಾರಲಿಂಗೇಶ್ವರಸ್ವಾಮಿಯ ಅರ್ಚಕ ದಶರಥ ಪೂಜಾರರು ಉತ್ಸವದಲ್ಲಿ ಬಂದು ಬಾಳೆ ಮರದ ಅಂಬು ಮತ್ತು ಸ್ಥಾಪಿತಗೊಂಡಿದ್ದ ದೇವರಿಗೆ ಮೂರು ಬಾರಿ ಪ್ರದಕ್ಷಿಣೆ ಮಾಡಿ ನಂತರ ಬೆಣ್ಣೆ ಮೆತ್ತಿದ್ದ ಮತ್ತು ಹಳದಿ ಸೇವಂತಿಗೆ ಪುಷ್ಪಗಳಿಂದ ಅಲಂಕರಿಸಲಾಗಿದ್ದ ದೊಡ್ಡಬಿಲ್ಲಯ್ಯನನ್ನು 4.30ಕ್ಕೆ ಏರಿ ಕೈಯಲ್ಲಿದ್ದ ಗಂಟೆಯನ್ನು ಮೂರು ಬಾರಿ ಬಾರಿಸಿದ ಕೂಡಲೇ ಸುತ್ತಲೂ ಗಾಢ ಮೌನ ಆವರಿಸಿತು. ನಂತರ ತ್ರಿಶೂಲ ಸ್ವಾಮಿಯು ಮುಂದಿನ ವರ್ಷದ ಭವಿಷ್ಯದ ನುಡಿಗಳನ್ನು ನ್ಯಾಯನೀತಿಯ ತೂಗಿಸಿ ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ ಸೃಷ್ಟಿಗೆ ನಾಡು ಸಿರಿಯಾಯಿತು. ಮದಗಜಗಳು ಕಾದಾಡಿದರು. ಕತ್ತಲೆಯ ದೀಪಕ್ಕೆ ಬೆಳಕಾಯಿತು. ಸರ್ವರು ಎಚ್ಚರದಿಂದರಬೇಕು ಪರಾಕ್ ಎಂದು ನುಡಿದು ಬಿಲ್ಲಪ್ಪನಿಂದ ಜಾರಿದರು. ಸ್ಥಳದಲ್ಲಿ ನೆರೆದಿದ್ದ ಗೊರವರ ಗಂಟೆ ಮತ್ತು ಢಮರುಗಳ ಸದ್ದಿನೊಂದಿಗೆ ಏಳುಕೋಟಿ ಏಳುಕೋಟಿ ಚಾಂಗಮಲೋ ಎನ್ನುವ ಸದ್ದು ಮಾರ್ದನಿಸಿತು. ನೆರೆದಿದ್ದ ಭಕ್ತರು ಹರ್ಷೋದ್ಘಾರ ಮಾಡಿದರು. ಕಾರ್ಣಿಕದ ದೃಶ್ಯವನ್ನು ಮೊಬೈಲ್ಗಳಲ್ಲಿ ಚಿತ್ರೀಕರಿಸಿಕೊಂಡರು. ದೇವಾಲಯದ ಪೂಜಾರು ವಿಜೇತ್ ಹಾಗೂ ಗೌಡರು ಉಸ್ತುವಾರಿ ವಹಿಸಿದ್ದರು.
ಕಾರ್ಣಿಕದ ಬಳಿಕ ಶ್ರೀ ವೀರಭದ್ರಸ್ವಾಮಿಯ ಗುರಿಕಾರ ಅಂಬು ಹೊಡೆಯುವ ಸಲುವಾಗಿ ನೆಟ್ಟಿದ್ದ ಬಾಳೆಕಂದಿಗೆ ಬಾಣ ಹೂಡಿ ಕತ್ತರಿಸಿದ ನಂತರ ಭಕ್ತರು ಉತ್ಸವ ಮೂರ್ತಿಗಳೊಂದಿಗೆ ತೆರಳಿದರು. ಬುಧವಾರ ಸಂಜೆ ದೇವಸ್ಥಾನದ ಆವರಣದೊಳಗೆ ವಿಜೃಂಭಣೆಯ ದೋಣಿ ಸೇವೆ ಸಾವಿರಾರು ಭಕ್ತರ ಸಮ್ಮಖದಲ್ಲಿ ಜರುಗಿತು. ಅ.22ರಂದು ಬೀರೂರಿನ ರಾಜಬೀದಿಗಳಲ್ಲಿ ಶ್ರೀ ಸ್ವಾಮಿಯ ಉತ್ಸವದೊಂದಿಗೆ ದಸರಾ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಈ ಬಾರಿ ನುಡಿದ ಕಾರ್ಣಿಕದಲ್ಲಿ ಸೃಷ್ಟಿಗೆ ನಾಡು ಸಿರಿಯಾಯಿತು-ಉತ್ತಮ ಮಳೆ ಸಮೃದ್ಧ ಬೆಳೆ, ವಾಣಿಜ್ಯ ಕ್ಷೇತ್ರದಲ್ಲಿ ಪ್ರಗತಿಯ ಸಂಕೇತವಾಗಿದೆ. ಮದಗಜಗಳು ಕಾದಾಡಿದರು-ಪ್ರಭಾವಿ ವ್ಯಕ್ತಿಗಳು ಅಥವಾ ಬಲಿಷ್ಠ ಗುಂಪುಗಳ ನಡುವೆ ಸಂಘರ್ಷ ಉಂಟಾಗುವ ಸೂಚನೆಯಾಗಿದೆ. ಕತ್ತಲೆಯ ದೀಪಕ್ಕೆ ಬೆಳಕಾಯಿತು-ಕಷ್ಟ, ಅಜ್ಞಾನ ಮತ್ತು ಅನ್ಯಾಯದ ನಡುವೆ ಜ್ಞಾನ, ಸತ್ಯ ಹಾಗೂ ನ್ಯಾಯದ ಬೆಳಕು ಮೂಡುವ ಸಂಕೇತ ಎಂದು ವ್ಯಾಖ್ಯಾನಿಸಿಕೊಂಡಿದ್ದಾರೆ. ಕಾರ್ಣಿಕದ ನುಡಿಯಲ್ಲಿ ಎರಡು ಎಚ್ಚರಿಕೆಯ ಸಂದೇಶಗಳು ಮತ್ತು ಒಂದು ಶುಭ ಸೂಚನೆ ಇದೆ ಎಂದು ಅರ್ಚಕರು ತಿಳಿಸಿದ್ದಾರೆ.
ರಾಜ್ಯದ ಬೆಳವಣಿಗೆ ಹಾಗೂ ದೇಶದ ಭವಿಷ್ಯದ ಸೂಚನೆಗಳನ್ನು ಕಾರ್ಣಿಕರ ಮೂಲಕ ತಿಳಿಯಬಹುದು ಎಂಬ ನಂಬಿಕೆಯಿಂದ ಭಕ್ತರು ಈ ದೈವವಾಣಿಯನ್ನು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಕುತೂಹಲದಿಂದ ಆಲಿಸಿದರು. ಇಲ್ಲಿನ ಕಾರ್ಣಿಕದ ನುಡಿ ವರ್ಷದೊಳಗೆ ನಡೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಕಾರ್ಣಿಕದ ಮೂರು ದಿನಗಳ ಮುಂಚೆಯೇ ಪೂಜಾರರಾದ ದಶರಥರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಪ್ರತಿ ಬಾರಿಯಂತೆ ಆಯುಧಪೂಜೆ ಹಿಂದಿನ ದಿನ 3 ದಿನಗಳ ಕಾಲ ಪೂಜಾರರು ಉಪವಾಸ ವ್ರತಾಚರಣೆ ನಡೆಸಿ ಪೂಜಾ ಕೈಂಕರ್ಯ ನಡೆಸಿದರು. ವಿಜಯದಶಮಿಯ ರಾತ್ರಿ ಸೇವಂತಿಗೆ ಹೂವಿನಲ್ಲಿ ಅಲಂಕೃತಗೊಂಡ ಸ್ವಾಮಿಯು ಕಾರ್ಣಿಕ ಮತ್ತು ಬನ್ನಿ ಮುಡಿಯಲು ಪೂಜಾರರನ್ನು ಕರೆತರುವುದು ಇಲ್ಲಿನ ವಿಶೇಷ.