- ಬಸವತತ್ವ ಪೀಠದ ಡಾ. ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಆತಂಕ
- ಹಗಲು-ರಾತ್ರಿ ಎನ್ನದೇ ರೀಲ್ಸ್ ವೀಕ್ಷಣೆ
ಚಿಕ್ಕಮಗಳೂರು: ವಿಶ್ವದಲ್ಲಿ ಭಾರತ ಅತಿ ಹೆಚ್ಚು ಯುವ ಸಮೂಹ ಹೊಂದಿರುವ ದೇಶವಾಗಿದ್ದು, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಸಾಮಾಜಿಕ ಜಾಲತಾಣದ ಚಟಕ್ಕೆ ಬಿದ್ದು, ಹಗಲು-ರಾತ್ರಿ ಎನ್ನದೇ ರೀಲ್ಸ್ ವೀಕ್ಷಣೆ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಯುವ ಜನರ ದೃಹಿಕ ಮತ್ತು ಮಾನಸಿಕ ಆರೋಗ್ಯ ಹಾಳಾಗುತ್ತಿದೆ. ಕೌಶಲ್ಯ ಬೆಳೆಸಿಕೊಂಡು ಬದುಕು ರೂಪಿಸಿಕೊಳ್ಳಬೇಕಾದ ಯುವಕರು ನಿರ್ವೀರ್ಯರಾಗುತ್ತಿದ್ದಾರೆ ಎಂದು ಬಸವತತ್ವ ಪೀಠದ ಡಾ. ಶ್ರೀಬಸವಮರುಳಸಿದ್ದ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿರುವ ಶ್ರೀ ಬಸವತತ್ವಪೀಠಕ್ಕೆ ಶನಿವಾರ ಭೇಟಿ ನೀಡಿದ ಚಿಕ್ಕಮಗಳೂರು-ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಬಿಜೆಪಿ ಮುಖಂಡರು ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರದ ಸಾಧನೆಗಳ ''ಸಾರ್ವಜನಿಕ ಸೇವೆಯೇ ಸಂಕಲ್ಪ'' ಹಾಗೂ ''ರಾಷ್ಟ್ರ ನಿರ್ಮಾಣವೇ ಗುರಿ'' ಪುಸ್ತಕ ನೀಡಿ, ಕೇಂದ್ರ ಸರ್ಕಾರದ ಕಳೆದ 12 ವರ್ಷದ ಸಾಧನೆಯ ಬಗ್ಗೆ ವಿವರಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು ಯುವಪೀಳಿಗೆಯನ್ನು ಸಾಮಾಜಿಕ ಜಾಲತಾಣದ ಗೀಳಿಗೆ ತಳ್ಳಿ ಭಾರತವನ್ನು ನಿರ್ವಿರ್ಯರನ್ನಾಗಿಸುವ ಹುನ್ನಾರ ಅಡಗಿದೆಯೇ ಎಂಬ ಆತಂಕ ವ್ಯಕ್ತಪಡಿಸಿದರಲ್ಲದೆ, ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂದು ಹೇಳಿದರು.
ಡಾ.ಬಸವ ಮರುಳಸಿದ್ಧ ಸ್ವಾಮೀಜಿ, ಸುಸ್ಥಿರ ನಾಯಕತ್ವ ಹಾಗೂ ನಿರ್ದಿಷ್ಟ ಗುರಿಯಡಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದರು.
ರಾಷ್ಟ್ರದ ಶಕ್ತಿ ಕುಗ್ಗಿಸುವ ಕೆಲಸ ಆಗಬಾರದು. ಕೇಂದ್ರ ಸರ್ಕಾರವು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರಬೇಕಿದೆ. ಇಲ್ಲವಾದರೇ, ರಾಷ್ಟ್ರ ಮುಂದೊಂದು ದಿನ ದೊಡ್ಡ ಅಪಾಯ ಎದುರಿಸಬೇಕಾಗಲಿದೆ ಎಂದು ಎಚ್ಚರಿಸಿದರು.
ಇದು ತಕ್ಷಣ ಹಾಗೂ ನೇರವಾದ ಪರಿಣಾಮ ಬೀರದಿದ್ದರೂ, ಮುಂದಿನ 10 ರಿಂದ 15 ವರ್ಷದ ನಂತರ ಇದರ ದುಷ್ಪರಿಣಾಮ ಗೋಚರವಾಗಲಿದೆ. ಈಗಾಗಲೇ ಹಾದಿ-ಬೀದಿಯಲ್ಲಿ ಐವಿಎಫ್ ಸೆಂಟರ್ ಶುರುವಾಗಿದೆ ಎಂದರು.
ಅದಕ್ಕೆ ಪ್ರಕ್ರಿಯೆ ನೀಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಬಸವತತ್ವ ಪೀಠದ ಖಜಾಂಚಿ ಸದಾಶಿವಪ್ಪ, ಟ್ರಸ್ಟಿ ಜಗದೀಶ್ ಬಾಬು, ಬಿಜೆಪಿ ಮುಖಂಡ ಕೋಟೆ ರಂಗನಾಥ್, ರಾಜೇಶ್, ಬಿ.ಟಿ.ಶಶಿಧರ್, ಸಿ.ಪಿ.ಉಮೇಶ್,ಡಿ.ಸಿ.ರಾಜು ಸೇರಿದಂತೆ ಮೊದಲಾದವರಿದ್ದರು.
ನಾಲ್ಕೈದು ವರ್ಷದಲ್ಲಿ ಭಾರತ ಬಡತನ ಮುಕ್ತ
ಬಡತನ ರೇಖೆಗಿಂತ ಕೆಳಗಿರುವವ ಪ್ರಮಾಣ ಶೇ.24.5 ರಿಂದ ಶೇ.5.5ಕ್ಕೆ ಇಳಿಕೆಯಾಗಿದ್ದು, ಮುಂದಿನ ನಾಲ್ಕೈದು ವರ್ಷದಲ್ಲಿ ಬಡತನ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲಾಗುವುದು ಎಂದು ಚಿಕ್ಕಮಗಳೂರು-ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಶ್ರೀಗಳಿಗೆ ವಿವರಿಸಿದ ಅವರು, ಕೇಂದ್ರ ಸರ್ಕಾರ ಕಳೆದ 12 ವರ್ಷದಲ್ಲಿ ರಾಷ್ಟ್ರ ಭದ್ರತೆ, ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತುವುದು, ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛ ಭಾರತ ಅಭಿಯಾನ, ಸಮರ್ಥ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.
2014ರಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಬಡತನ ರೇಖೆಗಿಂತ ಕೆಳಗಿರುವವ ಪ್ರಮಾಣ ಶೇ.24.5 ರಷ್ಟು ಇತ್ತು, ಇದೀಗ ದೇಶದಲ್ಲಿ ಶೇ.99 ರಷ್ಟು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಬಡತರೇಖೆಗಿಂತ ಕೆಳಗಿರುವವ ಸಂಖ್ಯೆ ಶೇ.5.5ಕ್ಕೆ ಇಳಿಕೆಯಾಗಿದೆ. ಇದೀಗ ದೇಶದಲ್ಲಿ ಶೌಚಗೃಹ ಇಲ್ಲದ ಮನೆ ಇಲ್ಲ ಎಂದು ವಿವರಿಸಿದರು.
2014ರಲ್ಲಿ ಭಾರತದ ಆರ್ಥಿಕತೆ 16ನೇ ಸ್ಥಾನದಲ್ಲಿ ಇತ್ತು. ಇದೀಗ, 4ನೇ ಸ್ಥಾನಕ್ಕೆ ಬಂದಿದ್ದು, ಮುಂದಿನ ಒಂದು ವರ್ಷದಲ್ಲಿ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆ ಶಕ್ತಿಯಾಗಿ ಹೊರಹೊಮ್ಮಲಿದೆ. 2047ರ ವೇಳೆಗೆ ಭಾರತ ವಿಶ್ವದ 1ನೇ ಬಲಿಷ್ಠ ಆರ್ಥಿಕತೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.