ಬಾಳೆಹೊನ್ನೂರು: ಖಾಂಡ್ಯ ಹೋಬಳಿಯ ಹುಣಸೇಹಳ್ಳಿ ಸಮೀಪ ಹ್ಯಾರಂಬಿ ಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಂಗಳವಾರ ಹಾವೇರಿ ಮೂಲದ ಕಾರ್ಮಿಕನೊಬ್ಬ ಬಲಿಯಾಗಿದ್ದಾನೆ.
ಹಾವೇರಿ ಜಿಲ್ಲೆಯ ತಿಳುವಳ್ಳಿ ಗ್ರಾಮದ ಯಲ್ಲಪ್ಪ(45) ಮೃತ ದುರ್ದೈವಿ. ಈತ ಹ್ಯಾರಂಬಿ ಪುರದ ಕಾಫಿತೋಟಕ್ಕೆ ಭಾನುವಾರ ರಾತ್ರಿಯಷ್ಟೇ ತನ್ನ ಸ್ವಗ್ರಾಮದಿಂದ ಕೆಲಸಕ್ಕಾಗಿ ಆಗಮಿಸಿದ್ದು, ಬಸ್‌ನಿಂದ ಇಳಿದು ತೋಟಕ್ಕೆ ತೆರಳುವ ವೇಳೆ ಕಾಡಾನೆ ತುಳಿದು ಸಾಯಿಸಿದೆ.
ಸೋಮವಾರ ಬೆಳಗ್ಗೆ ತೋಟದ ಕಾರ್ಮಿಕರು ಕೂಲಿ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ತೋಟದ ಮಾಲೀಕರು ಕೂಡಲೇ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಶವವನ್ನು ಖಾಸಗಿ ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದರು.
ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಜುಲೈನಲ್ಲಿ ಹೊನ್ನಾಳಿ ಮೂಲದ ಕಾರ್ಮಿಕ ಮಹಿಳೆ ಅನಿತಾ ಹಾಗೂ ಅಂಡವಾನೆ ಸಮೀಪದ ಸುಬ್ಬೇಗೌಡ ಎಂಬುವರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಈ ವೇಳೆ ರೈತರು ಪ್ರತಿಭಟನೆ ನಡೆಸಿದ್ದರಿಂದ ಅರಣ್ಯ ಇಲಾಖೆ ಒಂದು ಕಾಡಾನೆಯನ್ನು ಹಿಡಿದು ಸ್ಥಳಾಂತರ ಮಾಡಿತ್ತು. ಕಳೆದ ಡಿಸೆಂಬರ್‌ನಲ್ಲಿ ಆನವಟ್ಟಿಯ ಗಣಪತಿ ಎಂಬ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ್ದು ಆತ ಇದೀಗ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾನೆ.
ರೈತ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ಮಾಜಿ ಕ್ಷೇತ್ರಾಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಕ್ಷೇತ್ರದಲ್ಲಿ ಆನೆ ದಾಳಿಗೆ ಹತ್ತಾರು ಸಾವುಗಳು ಸಂಭವಿಸಿದ್ದರೂ ಜನಪ್ರತಿನಿಧಿಗಳು, ಅರಣ್ಯ ಸಚಿವರು ಚಕಾರವೆತ್ತುತ್ತಿಲ್ಲ. ಮೃತಪಟ್ಟವರಿಗೆ ಪರಿಹಾರದ ಚೆಕ್ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ನಮಗೆ ಪರಿಹಾರದ ಚೆಕ್ ಬೇಡ, ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು. ಆನೆ, ಕಾಡುಕೋಣಗಳು ನಾಡಿಗೆ ಬಾರದಂತೆ ಶಾಶ್ವತ ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಮಾಡಬೇಕು. ಆನೆ ಕಾರ್ಯಪಡೆಯನ್ನು ಕೂಡಲೇ ಈ ಭಾಗಕ್ಕೆ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಸದಸ್ಯ ಅಭಿಷೇಕ್ ಹೊಸಳ್ಳಿ ಮಾತನಾಡಿ, ಕ್ಷೇತ್ರದಲ್ಲಿ ಹಲವು ಸಾವುಗಳಾದರೂ ಶಾಸಕ, ಸಂಸದರು ಗಮನಹರಿಸುತ್ತಿಲ್ಲ. ಸ್ಥಳಕ್ಕೆ ಡಿಸಿ, ಎಸ್ಪಿ ಬಂದು ಶಾಶ್ವತ ಪರಿಹಾರ ಕಲ್ಪಿಸಬೇಕು. ಕಾರ್ಮಿಕನ ಸಾವಿನ ಕುರಿತು ಕೂಡಲೇ ಎ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ, ಹೆಚ್ಚುವರಿ ಎಸ್ಪಿ ಸಿ.ಟಿ.ಜಯಕುಮಾರ್, ಡಿವೈಎಸ್ಪಿ ಬಾಲಾಜಿ ಸಿಂಗ್, ಸಿಪಿಐ ಗುರು ಕಾಮತ್, ಕೊಪ್ಪ ಡಿಎ್ಒ ಶಿವಶಂಕರ್, ಎಸಿಎ್ ಮೋಹನ್ ಭೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.