ಪುರುಷ ಪ್ರಧಾನ ಸಮಾಜದಲ್ಲೂ ಮಹಿಳೆಯರು ಸಬಲ

ಮಾಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ಅಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕೆ.ಟಿ.ವೆಂಕಟೇಶ್ ಉದ್ಘಾಟಿಸಿದರು.
ಮಾಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ಅಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕೆ.ಟಿ.ವೆಂಕಟೇಶ್ ಉದ್ಘಾಟಿಸಿದರು.
Published on
ಬಾಳೆಹೊನ್ನೂರು : ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಬಲಳಾಗಿ ಬೆಳೆದಿದ್ದಾಳೆ ಎಂದು ಸಾಹಿತಿ ಎಸ್.ಎನ್.ಚಂದ್ರಕಲಾ ಕೊಪ್ಪ ಹೇಳಿದರು.
ಮಾಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಆಯೋಜಿಸಿದ್ದ ದತ್ತಿ ಉಪನ್ಯಾಸಕ ಕಾರ್ಯಕ್ರಮದಲ್ಲಿ ಸ್ತ್ರೀ ಸಬಲೀಕರಣ ಕುರಿತು ಮಾತನಾಡಿ, ಮಹಿಳೆಯರು ಇಂದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಪಡೆದಿದ್ದಾರೆ. ಪಂಚಾಯಿತಿ ಮಟ್ಟದಿಂದ ರಾಷ್ಟ್ರಪತಿಯವರೆಗೆ ತನ್ನ ಛಾಪನ್ನು ಮೂಡಿಸಿದ್ದಾಳೆ ಎಂದರು.
ಚಂದ್ರ ಗ್ರಹ, ಮಂಗಳ ಗ್ರಹ ಯಾನದ ಮೂಲಕ ವೈಜ್ಞಾನಿಕವಾಗಿಯೂ ತನ್ನ ಸಾಧನೆ ಮಾಡಿದ್ದಾಳೆ. ಆದರೂ ಕೂಡ ಇಂದು ಕೆಲವೊಮ್ಮ ಮಹಿಳೆ ದೌರ್ಜನ್ಯಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗುತ್ತಾಳೆ. ಪ್ರಪಂಚ ಇಷ್ಟೆಲ್ಲಾ ಮುಂದುವರಿದರೂ ಸಹ ಒಂಟಿ ಮಹಿಳೆ ಮತ್ತು ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವ ಪರಿಸ್ಥಿತಿ ಬಾರದಿರುವುದು ವಿಷಾದನೀಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಸರ್ಕಾರಿ ಶಾಲೆಯಲ್ಲಿಯೇ ಹೆಚ್ಚು ಪ್ರತಿಭಾನ್ವಿತರಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಎಲ್ಲ ಶಾಲಾ, ಕಾಲೇಜುಗಳಲ್ಲಿ ಕಥೆ, ಕವನ, ಕಾದಂಬರಿ ರಚಿಸುವ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯಗಳು ದೊರೆಯುತ್ತಿದ್ದರೂ ಸಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ. ಪಠ್ಯದ ಜತೆಗೆ ಪಠ್ಯೇತೇರ ಚಟುವಟಿಕೆ ನಡೆಯುವುದು ಹೆಚ್ಚು ಸರ್ಕಾರಿ ಶಾಲೆಗಳಲ್ಲಿಯೇ. ಕಸಾಪ ದತ್ತಿ ಉಪನ್ಯಾಸಗಳನ್ನು ತನ್ನ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿದೆ. 18 ವರ್ಷ ತುಂಬಿದ ಪ್ರತಿಯೊಬ್ಬರೂ ಕಸಾಪದ ಸದಸ್ಯತ್ವ ಪಡೆದುಕೊಂಡು ಕನ್ನಡದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕಸಾಪ ಗೌರವಾಧ್ಯಕ್ಷ ಕೆ.ಟಿ.ವೆಂಕಟೇಶ್, ಕಸಾಪ ಸದಸ್ಯ ಮಂಜೇಶ್ ಮಾಗುಂಡಿ, ರಕ್ಷಾ, ಅಮೂಲ್ಯ, ಮುಖ್ಯಶಿಕ್ಷಕ ರಮೇಶ್ ನಾಯಕ್, ಶಿಕ್ಷಕರಾದ ಮಂಜಪ್ಪ, ಕುಮಾರಸ್ವಾಮಿ, ಸ್ಫೂರ್ತಿ, ರಮ್ಯಾ, ಪ್ರತಿಮಾ, ಶ್ರೀಸ್ವಾಮಿ, ವೇಲು, ಮಂಜುನಾಥ್ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net