ಬೆಂಗಳೂರಿನಲ್ಲಿ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಮನವಿ ಸಲ್ಲಿಸಿದರು. ಡಾ. ಆರತಿ ಕೃಷ್ಣ, ತಲವಾನೆ ಪ್ರಕಾಶ್, ಕೆ.ಎಸ್.ರವೀಂದ್ರ, ಕುಮಾರಸ್ವಾಮಿ, ಸತ್ಯಪ್ರಕಾಶ್, ಭಂಡಿಗಡಿ ನಾಗೇಂದ್ರ ಇತರರಿದ್ದರು.
ಬಾಳೆಹೊನ್ನೂರು: ರಾಜ್ಯದಲ್ಲಿ ಆರೋಗ್ಯ ಇಲಾಖೆ ಹೊರಡಿಸಿರುವ ಗುಟ್ಖಾ ನಿಷೇಧ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಗುಟ್ಖಾ ನಿಷೇಧಿಸಿದ ಪರಿಣಾಮ ಅಡಿಕೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ಸುಮಾರು 7 ಸಾವಿರ ರೂಪಾಯಿ ಧಾರಣೆ ಕುಸಿದಿದೆ. ಇದರಿಂದಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಲೆನಾಡಿನಲ್ಲಿ ಅಡಿಕೆಗೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗದಿಂದ ಬಹುತೇಕ ತೋಟಗಳು ನಾಶವಾಗಿದ್ದು ರೈತರು ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ತಿಳಿಸಿದರು.
ಗುಟ್ಖಾದಲ್ಲಿರುವ ಹಾನಿಕಾರಕ ಅಂಶ ನಿಷೇಧಿಸಲು ಸಂಪೂರ್ಣ ಬೆಂಬಲವಿದೆ. ಆದರೆ ಅದರ ಹೆಸರಿನಲ್ಲಿ ಅಡಿಕೆ ನಿಷೇಧಿಸಬಾರದು. ಒಂದು ಕಡೆ ಸರ್ಕಾರ ಅಡಿಕೆ ಕೃಷಿಗೆ ಸಹಾಯಧನ ನೀಡುತ್ತಿದ್ದು, ಇನ್ನೊಂದು ಕಡೆ ನಿಷೇಧದ ಆದೇಶ ಹೊರಡಿಸುತ್ತಿದೆ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.70ರಷ್ಟು ಅಡಿಕೆಯನ್ನು ಕರ್ನಾಟಕದಲ್ಲೇ ಬೆಳೆಯಲಾಗುತ್ತಿದೆ. ಇಲ್ಲೇ ನಿಷೇಧಿಸಿದರೆ ಉಳಿದ ರಾಜ್ಯಗಳಿಗೆ ಕೆಟ್ಟ ಸಂದೇಶ ತಲುಪುತ್ತದೆ. ಆದ್ದರಿಂದ ಅಡಿಕೆ ನಿಷೇಧಿಸಿಲ್ಲ ಎಂಬ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್, ಅಡಿಕೆಯನ್ನು ಎಲ್ಲೂ ನಿಷೇಧಿಸಿಲ್ಲ. ಆದರೆ ಆರೋಗ್ಯದ ಹಿತದೃಷ್ಟಿಯಿಂದ ಅಡಿಕೆಯೊಂದಿಗೆ ಗುಟ್ಖಾದಲ್ಲಿರುವ ಹಾನಿಕಾರಕ ಅಂಶಗಳ ಉತ್ಪನ್ನ ಮಾತ್ರ ನಿಷೇಧಿಸಲಾಗಿದೆ. ವಿದೇಶಗಳಿಂದ ತೆರಿಗೆ ತಪ್ಪಿಸಿ ಭಾರಿ ಪ್ರಮಾಣದಲ್ಲಿ ಅಡಿಕೆಯನ್ನು ಕಳ್ಳ ಮಾರ್ಗದಲ್ಲಿ ಭಾರತಕ್ಕೆ ತರಲಾಗುತ್ತಿದೆ. ಇದನ್ನು ತಡೆಗಟ್ಟಿದಲ್ಲಿ ಮಾರುಕಟ್ಟೆಯಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುತ್ತದೆ. ಅಡಿಕೆ ಬೆಳೆಗಾರರಿಗೆ ತೊಂದರೆ ಮಾಡುವ ಉದ್ದೇಶವಿಲ್ಲ. ಗುಟ್ಖಾ ನಿಷೇಧ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಳನ್ನು ಪ್ರತಿ ವರ್ಷ ಸಮೀಕ್ಷೆ ಮಾಡಿ ದಾಖಲಿಸುವುದು ಕಡ್ಡಾಯವಾಗಿದೆ. ಪ್ರತಿ ವರ್ಷ ತೋಟಗಾರಿಕೆ ಬೆಳೆಗಳನ್ನು ಯಾವ ರೈತರೂ ಕಿತ್ತು, ನೆಡುವ ಪದ್ಧತಿ ಇಲ್ಲ. ಆದ್ದರಿಂದ ತೋಟಗಾರಿಕೆ ಬೆಳೆ ಸಮೀಕ್ಷೆ ನಡೆಸುವುದರಲ್ಲಿ ಅರ್ಥವಿಲ್ಲ. ಇದನ್ನು ಐದು ವರ್ಷಕ್ಕೊಮ್ಮೆ ನಡೆಸುವಂತೆ ಆದೇಶಿಸಬೇಕು ಹಾಗೂ ಕಂದಾಯ ಭೂಮಿಯನ್ನು ಸೆಕ್ಷನ್ 4 ಮಾಡುವ ಮುನ್ನ ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಉದ್ದೇಶ, ವಸತಿಗಾಗಿ ಕನಿಷ್ಠ 100 ಎಕರೆ ಮೀಸಲಿಡಬೇಕು ಎಂದು ಒತ್ತಾಯಿಸಿ ಕಂದಾಯ ಸಚಿವ ಪರಮೇಶ್ವರ್ ಅವರಿಗೆ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದಿಂದ ಸಲ್ಲಿಸಲಾಯಿತು.
ಕಸ್ತೂರಿ ರಂಗನ್ ವರದಿ, ಪ್ರಾಣಿ ದಾಳಿ, ಸೆಕ್ಷನ್ 4 ಸಮಸ್ಯೆ ಪರಿಹರಿಸುವ ಜತೆಗೆ ಮಲೆನಾಡಿನಲ್ಲೇ ಸಭೆ ನಡೆಸುವಂತೆ ವಿಧಾನಪರಿಷತ್ ಸದಸ್ಯೆ ಆರತಿ ಕೃಷ್ಣ ನೀಡಿದ ಮನವಿಗೆ ಸ್ಪಂದಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು, ಮಲೆನಾಡಿನ ಸಮಸ್ಯೆಗಳ ಜತೆಗೆ ಪರಿಹಾರವನ್ನೂ ತಿಳಿಸಿ. ಅಲ್ಲಿನ ವಾಸ್ತವ ಸ್ಥಿತಿ ಅರಿಯಲು ಕೊಪ್ಪ ಅಥವಾ ಶೃಂಗೇರಿಯಲ್ಲಿ ಸೆಪ್ಟೆಂಬರ್ ಮೊದಲ ವಾರ ಅಧಿಕಾರಿಗಳು, ರೈತರ ಸಭೆ ನಡೆಸುತ್ತೇನೆ ಎಂದು ಭರವಸೆ ನೀಡಿದರು. ಇನ್ನು ಕಸ್ತೂರಿರಂಗನ್ ವರದಿಯಿಂದ ಉಂಟಾಗುವ ಪರಿಣಾಮಗಳ ಕುರಿತು ದೆಹಲಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಡಿಕೆ ಬೆಳೆಗಾರರ ಸಂಘದ ಪ್ರತಿನಿಧಿಗಳಿಗೆ ತಿಳಿಸಿದರು.
ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ರವೀಂದ್ರ, ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಸತ್ಯಪ್ರಕಾಶ್, ಕುಮಾರಸ್ವಾಮಿ, ಶ್ರೀಕಾಂತ್, ಸತೀಶ್ ಜೈನ್, ಭಂಡಿಗಡಿ ನಾಗೇಂದ್ರ, ಯೂಸುಫ್ ಪಟೇಲ್ ಇತರರಿದ್ದರು.