7ನೇ ಕರಡು ಅಧಿಸೂಚನೆ ಹಿಂದಕ್ಕೆ ಪಡೆಯಲಿ

ಸುದ್ದಿಗೋಷ್ಠಿಯಲ್ಲಿ ಗೇರ್‌ಬೈಲು ನಟರಾಜ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗೇರ್‌ಬೈಲು ನಟರಾಜ ವಿವರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ವಿರುದ್ಧ
  • ಪ್ರತಿಭಟನೆಗೆ ತಯಾರಿ
ಎನ್.ಆರ್.ಪುರ: ಕೇಂದ್ರ ಸರ್ಕಾರ ಹೊರಡಿಸಿರುವ ಪರಿಸರ ಸೂಕ್ಷ್ಮ ವಲಯ 7ನೇ ಅಧಿಸೂಚನೆ ಹಿಂದಕ್ಕೆ ಪಡೆಯದಿದ್ದರೆ ಕಾಂಗ್ರೆಸ್‌ನಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಿದೆ ಎಂದು ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲು ನಟರಾಜ ಹೇಳಿದರು.
 ಕೇಂದ್ರ ಸರ್ಕಾರ ಹೊರಡಿಸಿದ ಪರಿಸರ ಸೂಕ್ಷ್ಮವಲಯ ಅಧಿಸೂಚನೆಯಂತೆ ರಾಜ್ಯದ 9 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರಲಿದೆ. ಎನ್.ಆರ್.ಪುರ ತಾಲೂಕಿನ 9 ಗ್ರಾಪಂಗಳ ಅಳೇಹಳ್ಳಿ, ಅರಳಿಕೊಪ್ಪ, ಬಾಳೆ, ಬೆಳ್ಳೂರು, ಬೈರಾಪುರ, ದಂಡುಬಿಟ್ಟಹಾರ, ದಾವಣ, ಗುಬ್ಬಿಗಾ, ಆರಂಬಳ್ಳಿ ಸೇರಿದಂತೆ ಒಟ್ಟು 30 ಗ್ರಾಮಗಳು ಸೇರಿವೆ. ಉದ್ದೇಶಿತ ಪರಿಸರ ಸೂಕ್ಷ್ಮ ಅಧಿಸೂಚನೆ ಜಾರಿಗೆ ಬಂದರೆ ರೈತರು, ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರದಿಂದ 6ನೇ ಅಧಿಸೂಚನೆ ಬಂದಾಗ ಸಿದ್ದರಾಮಯ್ಯ ಅವರ ಸರ್ಕಾರ ಪರಿಸರ ಸೂಕ್ಷ್ಮ ವಲಯ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪ ಸಲ್ಲಿಸಿತ್ತು. ಈಗ ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ವಿಶೇಷ ಸಭೆಯಲ್ಲಿ ಪರಿಸರ ಸೂಕ್ಷ್ಮ ವಲಯದ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಗುವುದು. ಗ್ರಾಮಸ್ಥರಿಂದ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯಕ್ಕೆ ಆಕ್ಷೇಪಣೆ ಸಲ್ಲಿಸಲಾಗುವುದು. ಮುಂದಿನ ಒಂದು ವಾರದ ಒಳಗೆ ಶಾಸಕರ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು. 
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಸೂಚನೆಯನ್ನು ಗಂಭೀರವಾಗಿ ತೆಗೆದುಕೊಂಡು ಕೇಂದ್ರ ಪರಿಸರ ಸಚಿವರಿಗೆ ಮನವರಿಕೆ ಮಾಡಿಕೊಟ್ಟು, ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ವಾಪಸ್ ಪಡೆಯಲು ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
 ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್, ಹೋಬಳಿ ಅಧ್ಯಕ್ಷ ಕೆ.ವಿ.ಸಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಸಿ.ಜೋಯಿ, ಕೆಡಿಪಿ ಸದಸ್ಯ ಮಾಳೂರುದಿಣ್ಣೆರಮೇಶ್, ಪಿಸಿಎಆರ್‌ಡಿ ಬ್ಯಾಂಕ್ ನಿರ್ದೇಶಕ ದೇವಂತರಾಜ್, ಕಾಂಗ್ರೆಸ್ ಮುಖಂಡರಾದ ನಾಗರಾಜ್ ಹೊನ್ನೇಕೊಡಿಗೆ, ಆದರ್ಶ ಬಿ. ಗೌಡ, ಜಾನ್‌ಪಾಲ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net