ಕಳಸ: ಮರಸಣಿಗೆ ಗ್ರಾಪಂ ಗುಮ್ಮನ್ ಖಾನ್ ಬಳಿ ಚಿರತೆ ಮರಿಗಳು ಪತ್ತೆಯಾಗಿವೆ ಎಂಬ ಸುದ್ದಿ ಹರಡಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ತೆರಳಿದ ಕಳಸ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಲ್ಲಿರುವುದು ಚಿರತೆ ಮರಿಗಳಲ್ಲ, ಕಾಡುಬೆಕ್ಕಿನ ಮರಿಗಳು ಎಂದು ತಿಳಿಸಿದ್ದಾರೆ.
ಗುಮ್ಮನ್ ಖಾನ್ ಸಮೀಪ ಕೆಲವು ಮರಿಗಳು ಕಂಡುಬಂದ ಹಿನ್ನೆಲೆಯಲ್ಲಿ ಅವು ಚಿರತೆ ಮರಿಗಳೆಂಬ ಸುದ್ದಿ ಸ್ಥಳೀಯವಾಗಿ ಹರಡಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದರು. ಮರಿಗಳ ಸ್ವರೂಪ ಗಮನಿಸಿ ಅವು ಚಿರತೆ ಮರಿಗಳಲ್ಲ. ಕಾಡುಬೆಕ್ಕಿನ ಮರಿಗಳು ಎಂದು ಕಳಸ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಹರೀಶ್ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಯಾವುದೇ ಕಾಡು ಪ್ರಾಣಿಗಳು ಅಥವಾ ಮರಿಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳನ್ನು ಮುಟ್ಟುವುದು, ಹಿಡಿಯುವುದು ಅಥವಾ ಗೊಂದಲ ಸೃಷ್ಟಿಸುವ ಬದಲು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.