ಮಲೆನಾಡಿಗರನ್ನು ಉಳಿಸಲು ಅಂತಿಮ‌ ಪರಿಹಾರವೇನು?

ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು. ಭನ್ವರ್ ಸಿಂಗ್ ಮೀನಾ, ಪುಲ್ಕಿತ್ ಮೀನಾ, ಕೆ.ಟಿ.ಬೋರಯ್ಯ ಮತ್ತಿತರರಿದ್ದರು.
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು. ಭನ್ವರ್ ಸಿಂಗ್ ಮೀನಾ, ಪುಲ್ಕಿತ್ ಮೀನಾ, ಕೆ.ಟಿ.ಬೋರಯ್ಯ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ
ಚಿಕ್ಕಮಗಳೂರು: ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಯಿಂದ ಮಲೆನಾಡಿಗರನ್ನು ಉಳಿಸಲು ಅಂತಿಮ ಪರಿಹಾರವೇನು ಹಾಗೂ ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಪ್ರಕ್ರಿಯೆ ನಡೆಯುತ್ತಿದೆಯೇ ಎಂದು ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳನ್ನು ಪ್ರಶ್ನಿಸಿದ್ದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಬಳಿಗೆ ಬರುವ ರೈತರು ಕಸ್ತೂರಿರಂಗನ್ ವರದಿ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಸಮಜಾಯಿಸಿ ನೀಡುವಂತೆ ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಕಸ್ತೂರಿ ರಂದನ್ ವರದಿ ಹಿನ್ನೆಲೆಯಲ್ಲಿ ಯಾವುದೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿಲ್ಲ. ಪ್ರಸ್ತುತ ಇರುವ ಅರಣ್ಯ ಕಾಯ್ದೆಗಳಂತೆ ಒತ್ತುವರಿ ತೆರವು ನಡೆಯುತ್ತಿದೆ. ಇದೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿಲ್ಲ. ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿ ಗುರುತಿಸುವ ನಿಟ್ಟಿನಲ್ಲಿ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಇದು ಇನ್ನೂ ಪೂರ್ಣಗೊಂಡಿಲ್ಲ ಎಂದು ಮಾಹಿತಿ ನೀಡಿದರು.
ಪರಿಸರ ಸೂಕ್ಷ್ಮ ಪ್ರದೇಶದ ಏಳನೆ ಕರಡು ಅಧಿಸೂಚನೆ ಬಂದಿದೆ. ಆದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಕಸ್ತೂರಿ ರಂಗನ್ ವರದಿ ಆಧರಿಸಿ ಪ್ರಸ್ತುತ ಒತ್ತುವರಿ ತೆರವು ಕಾರ್ಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 2014ರಿಂದ ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲ ಸರ್ಕಾರಗಳೂ ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆಗಳಿಗೆ ಆಕ್ಷೇಪಣೆ ಸಲ್ಲಿಸಿವೆ. ಕೇವಲ ಆಕ್ಷೇಪಣೆ ಸಲ್ಲಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಹೀಗಾಗಿ ಅಂತಿಮವಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಏನೇನು ಅವಕಾಶಗಳಿವೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿಕ್ರಿಯಿಸಿದ ಕೊಪ್ಪ ಡಿಎಫ್ಓ ಶಿವಶಂಕರ್, ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆಯಲ್ಲಿ ಗುರುತಿಸಿರುವ ಪ್ರದೇಶದ ಶೇ. 10ರಷ್ಟು ಪ್ರದೇಶ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಈಗಾಗಲೇ ಜಿಲ್ಲೆಯಲ್ಲಿ ನೋಟಿಫೈಡ್ ಆದ ಪರಿಸರ ಸೂಕ್ಷ್ಮ ಪ್ರದೇಶವಿದೆ. ಇದನ್ನು ಹೊರತುಪಡಿಸಿ ಜನವಸತಿ, ಕೃಷಿ ಭೂಮಿ ಹಾಗೂ ಸರ್ಕಾರಿ ಭೂಮಿ ಇರುವ ಪ್ರದೇಶಗಳನ್ನೊಳಗೊಂಡ ವೈಜ್ಞಾನಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದರೆ ಒಂದು ಹಂತಕ್ಕೆ ಸಮಸ್ಯೆ ಪರಿಹಾರವಾಗಲಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಭದ್ರಾ ಡೈರೆಕ್ಟರ್ ಪುಲ್ಕಿತ್ ಮೀನಾ, ಚಿಕ್ಕಮಗಳೂರು ಡಿಎಫ್ಓ ಕೆ.ಟಿ.ಬೋರಯ್ಯ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net