ಮೂಡಿಗೆರೆ: ಗೋಣಿಬೀಡು ಗ್ರಾಪಂ ವ್ಯಾಪ್ತಿಯ ಮಣ್ಣಿಕೆರೆ ಸಮೀಪ ನಿವೇಶನ ರಹಿತ ಫಲಾನುಭವಿಗಳು ನಿವೇಶನ ಹಾಗೂ ಮನೆ ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ನಾಲ್ಕು ದಿನದಿಂದ ಧರಣಿ ಮುಂದುವರಿಸಿದ್ದಾರೆ.
ಕಾಫಿ ತೋಟದ ಕೂಲಿ ಲೈನ್‌ನಲ್ಲಿ ವಾಸವಿರುವ ಕೂಲಿ ಕಾರ್ಮಿಕರು ಇಂದಿಗೂ ಸ್ವಂತ ನಿವೇಶನವಿಲ್ಲದೆ ಬದುಕು ಸಾಗಿಸುತ್ತಿದ್ದಾರೆ. ಗುಡಿಸಲು ನಿರ್ಮಿಸಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ತಾಪಂ ಇಒ ದಯಾವತಿ ಭೇಟಿ ನೀಡಿ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ನಿರ್ಮಿಸಿರುವ ಟೆಂಟ್ ತೆರವುಗೊಳಿಸಿ ಇಲ್ಲಿಂದ ಹೋಗಿ ಎಂದು ಹೇಳಿ ಹೋಗಿದ್ದಾರೆ. ಅಧಿಕಾರಿಗಳ ಹೇಳಿಕೆಗೆ ನಾವು ಬೆದರುವುದಿಲ್ಲ. ನಿವೇಶನ ಒದಗಿಸುವವರೆಗೆ ಸ್ಥಳದಿಂದ ನಿರ್ಗಮಿಸುವ ಪ್ರಶ್ನೆಯೆ ಇಲ್ಲ ಎಂದು ಪಟ್ಟು ಹಿಡಿದು ಸ್ಥಳದಲ್ಲಿ ಕುಳಿತಿದ್ದಾರೆ.
ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಕಳೆದ 20 ವರ್ಷದಿಂದ ನಿವೇಶನ ರಹಿತ ಫಲಾನುಭವಿಗಳು ಗೋಣಿಬೀಡು ಗ್ರಾಪಂಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ. 15 ವರ್ಷದಲ್ಲಿ ನಿವೇಶನಕ್ಕಾಗಿ 60ಕ್ಕೂ ಹೆಚ್ಚು ಬಾರಿ ತಾಲೂಕಿನ ವಿವಿಧ ಕಡೆ ಪ್ರತಿಭಟನೆ ನಡೆಸಿದರೂ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ದೂರಿದರು.
ಜಿ.ಅಗ್ರಹಾರ ಗ್ರಾಮದ ಸರ್ವೇ ನಂ.144ರಲ್ಲಿ 4.20 ಎಕರೆ ಜಾಗವನ್ನು ನಿವೇಶನಕ್ಕಾಗಿ ಮೀಸಲಿರಿಸಲಾಗಿತ್ತು. ಅದರಲ್ಲಿ ಈಗ ಸ್ಥಳೀಯರೊಬ್ಬರು 1.20 ಎಕರೆ ಒತ್ತುವರಿ ಮಾಡಿದ್ದಾರೆ. ಉಳಿದ ಜಾಗವನ್ನು ಕಂದಾಯ ಇಲಾಖೆಯಿಂದ ಗ್ರಾಪಂಗೆ ಹಸ್ತಾಂತರಿಸಲಾಗಿದೆ. ಗ್ರಾಪಂ ಅಧಿಕಾರಿಗಳು ಈ ವರೆಗೂ ಫಲಾನುಭವಿಗಳಿಗೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.