ಚಾರಣದ ಹಣ ಬೇಕು, ಅಭಿವೃದ್ಧಿ ಮಾತ್ರ ಕೇಳಬೇಡಿ

ನೇತ್ರಾವತಿ ಪೀಕ್‌ಗೆ ಹೋಗುವ ರಸ್ತೆಯಲ್ಲಿ ಪ್ರಾವಸಿಗರ ವಾಹನ ಸಿಕ್ಕಿ ಹಾಕಿಕೊಂಡಿರುವುದು.
ನೇತ್ರಾವತಿ ಪೀಕ್‌ಗೆ ಹೋಗುವ ರಸ್ತೆಯಲ್ಲಿ ಪ್ರಾವಸಿಗರ ವಾಹನ ಸಿಕ್ಕಿ ಹಾಕಿಕೊಂಡಿರುವುದು.
Published on
ಕಳಸ: ಪಶ್ಚಿಮ ಘಟ್ಟಗಳ ಹಸಿರು ಹಾಸಿನ ಮಧ್ಯದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 4,986 ಅಡಿ ಎತ್ತರದಲ್ಲಿ ಕಂಗೊಳಿಸುವ ನೇತ್ರಾವತಿ ಪೀಕ್ ಇತ್ತೀಚಿನ ವರ್ಷಗಳಲ್ಲಿ ಯುವಕರು ಮತ್ತು ಚಾರಣಿಗರ ಪಾಲಿನ ನೆಚ್ಚಿನ ತಾಣವಾಗಿದೆ.
ನೇತ್ರಾವತಿ ನದಿಯ ಉಗಮ ಸ್ಥಾನವಾದ ಈ ಸುಂದರ ಶಿಖರ ನೋಡಲು ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಈ ಪ್ರವಾಸಿ ವೈಭವದ ಅಸಲಿ ಮುಖ ಬೇರೆ ಇದೆ. ಚಾರಣಿಗರ ಪಾಲಿಗೆ ಸ್ವರ್ಗದಂತೆ ಕಾಣುವ ಈ ನೇತ್ರಾವತಿ ಪೀಕ್, ಅದನ್ನು ನಂಬಿ ಬದುಕುತ್ತಿರುವ ಸ್ಥಳೀಯ ಗ್ರಾಮಸ್ಥರ ಪಾಲಿಗೆ ಮಾತ್ರ ನಿತ್ಯನರಕ ದರ್ಶನ ಮಾಡಿಸುತ್ತಿದೆ.
ನೇತ್ರಾವತಿ ಪೀಕ್‌ಗೆ ಹೋಗಲು ಕಳಸ ತಾಲೂಕಿನ ಸಂಸೆ ಗ್ರಾಮದ ಮೂಲಕ ಎಳನೀರು, ಗುತ್ಯಡ್ಕ, ಕುರೆಕ್ಕಲ್ ಗ್ರಾಮಗಳ ಮೂಲಕ ಹಾದು ಹೋಗಬೇಕು. ಈ ಭಾಗದಲ್ಲಿ ಗುತ್ಯಡ್ಕ, ಕುರೆಕ್ಕಲ್, ಬಂಗಾರ್‌ಪಲ್ಕೆ, ಉಕ್ಕುಡ ಸೇರಿದಂತೆ ಹಲವು ಗ್ರಾಮಗಳಿದ್ದು, ಸುಮಾರು 90ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಭೌಗೋಳಿಕವಾಗಿ ಇವು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯಿತಿಗೆ ಸೇರುತ್ತವೆ. ಆದರೆ, ಈ ಭಾಗದ ಜನ ಸಣ್ಣ ಕೆಲಸವಾಗಬೇಕಾದರೂ ಅಥವಾ ಗ್ರಾಮ ಪಂಚಾಯಿತಿಗೆ ಹೋಗಬೇಕಾದರೂ ಬರೋಬ್ಬರಿ 110 ಕಿಲೋಮೀಟರ್ ದೂರ ಕ್ರಮಿಸಬೇಕು. ನಿತ್ಯದ ರೇಷನ್, ವೈದ್ಯಕೀಯ ನೆರವು ಹಾಗೂ ಶಾಲಾ ಶಿಕ್ಷಣಕ್ಕಾಗಿ ಕಳಸ ತಾಲೂಕನ್ನು ಆಶ್ರಯಿಸಿದ್ದಾರೆ. ಎರಡು ಜಿಲ್ಲೆಗಳ ಗಡಿ ಮಧ್ಯ ಸಿಲುಕಿರುವ ಈ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ.
ನೇತ್ರಾವತಿ ಪೀಕ್‌ಗೆ ಹೋಗುವ ಸುಮಾರು 5 ಕಿಲೋ ಮೀಟರ್ ಜೀಪ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇಲ್ಲಿ ಕೇವಲ ೆರ್‌ವೀಲ್ ಜೀಪುಗಳು ಮಾತ್ರ ಚಲಿಸಲು ಸಾಧ್ಯ. ಪ್ರತಿದಿನ ಈ ಚಾರಣಕ್ಕೆ ಕನಿಷ್ಠ 300 ಜನ ಬರುತ್ತಾರೆ. ಪ್ರವಾಸಿಗರನ್ನು ಹೊತ್ತ ನೂರಾರು ಜೀಪುಗಳು ದಿನಪೂರ್ತಿ ಈ ರಸ್ತೆಯಲ್ಲಿ ಸಂಚರಿಸುವುದರಿಂದ ಇಡೀ ರಸ್ತೆ ಕೆಸರು ಮಯವಾಗಿ ಕಲ್ಲುಗಳು ಎದ್ದು ಬಂದಿವೆ. ಕೆಲವು ಕಡೆ ಮಾಡಲಾದ ಕಾಂಕ್ರೀಟ್ ರಸ್ತೆಯೂ ಶಿಥಿಲಗೊಂಡು ಕಡಿದಾದ ತಿರುವುಗಳಲ್ಲಿ ಪ್ರಯಾಣವೇ ಮೃತ್ಯುಕೂಪದಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net