ಚಾತುರ್ಮಾಸ್ಯ ಸಂಕಲ್ಪಗಿಂತಲೂ ಮೊದಲು ವ್ಯಾಸಪೂಜೆಯನ್ನು ಯತಿಗಳು ನೆರವೇರಿಸಿದರು. ಪೂಜೆಯನ್ನು ಮೂರು ಗುಂಪುಗಳ ಆಚಾರ್ಯರಿಗೆ ಸಲ್ಲಿಸಲಾಗುತ್ತದೆ. ಒಂದೊಂದು ಗುಂಪಿನಲ್ಲಿ ಐದು ಆಚಾರ್ಯರುಗಳಿದ್ದು, ಕೃಷ್ಣ ಪಂಚಕ, ವ್ಯಾಸ ಪಂಚಕ ಹಾಗೂ ಶ್ರೀ ಶಂಕರಾಚಾರ್ಯ ಪಂಚಕ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕೃಷ್ಣ ಪಂಚಕದಲ್ಲಿ ಶ್ರೀ ಕೃಷ್ಣ, ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತರನ್ನೂ, ವ್ಯಾಸಪಂಚಕದಲ್ಲಿ ಶ್ರೀ ವೇದವ್ಯಾಸರು, ಜೈಮಿನಿ ಮಹರ್ಷಿ, ವೈಶಂಪಾಯನ ಮಹರ್ಷಿ, ಸುಮಂತು ಮಹರ್ಷಿ ಹಾಗೂ ಆಚಾರ್ಯ ಪಂಚಕದಲ್ಲಿ ಶ್ರೀ ಶಂಕರಾಚಾರ್ಯ, ಶ್ರೀ ಸುರೇಶ್ವರಾಚಾರ್ಯ, ಹಸ್ತಾಮಲಕಾಚಾರ್ಯ, ತೋಟಕಾಚಾರ್ಯ,ಪದ್ಮಪಾದಾಚಾರ್ಯರನ್ನೂ ಪೂಜಿಸಲಾಗುತ್ತದೆ. ಈ ಮೂರೂ ಗುಂಪುಗಳ ಪಂಚಕಗಳಿಗೆ ಶ್ರೀಗಳು ಪ್ರತ್ಯೇಕವಾಗಿ ಪೂಜೆ ಸಲ್ಲಿಸಿದರು. ಬಳಿಕ ಶೃಂಗೇರಿ ಜಗದ್ಗುರು ಪರಂಪರಾ ಸ್ತೋತ್ರಗಳನ್ನು ಪಠಿಸಿ ಗುರುಪರಂಪರೆಯಲ್ಲಿ ಬರುವ ಯತಿವರೇಣ್ಯರಿಗೆ ಪೂಜೆ ಸಲ್ಲಿಸಿದರು.