ಮುತ್ತಿನಕೊಪ್ಪ ಗ್ರಾಪಂ ಮರಾಠಿಕ್ಯಾಂಪ್, ಬೈರಾಪುರ ಗ್ರಾಮದ ಸುತ್ತಮುತ್ತ ಮಂಗಳವಾರ ಹುಲಿ ಪ್ರತ್ಯಕ್ಷವಾಗಿತ್ತು. ಅದೇ ದಿನ ಸಂಜೆ 4.30ರ ವೇಳೆಗೆ ಚಿರತೆ ಪ್ರತ್ಯಕ್ಷವಾಗಿದೆ. ಬೈರಾಪುರ ಗ್ರಾಮದ ಶಾಲೆಗೆ ಸುಮಾರು 23 ಮಕ್ಕಳು ಮರಾಠಿಕ್ಯಾಂಪಿನಿಂದ ಬರುತ್ತಾರೆ. ಅದೂ ಕೂಡ ಸುಮಾರು ಒಂದೂವರೆ ಕಿ.ಮೀ ವೈಲ್ಡ್‌ಲೈಫ್ ಪ್ರದೇಶದಿಂದ ನಡೆದುಕೊಂಡೇ ಈ ಶಾಲೆಗೆ ಬರುತ್ತಾರೆ. ಹುಲಿ, ಚಿರತೆ ಸಂಚಾರವಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಅಲ್ಲದೆ ಇದೇ ಗ್ರಾಮದಲ್ಲಿ ಅಂಗನವಾಡಿಯೂ ಇದ್ದು, ಇಲ್ಲಿಗೆ ಸುಮಾರು 13 ಮಕ್ಕಳು ಬರುತ್ತಿದ್ದಾರೆ. ಹುಲಿ ಹಾಗೂ ಚಿರತೆ ಸಂಚಾರದಿಂದ ಗಾಬರಿಗೊಂಡ ಪಾಲಕರು ಬುಧವಾರದಂದು ಶಾಲೆಗೆ ಬಂದು ಇನ್ನ್ನುಮುಂದೆ ಯಾವ ಮಕ್ಕಳನ್ನೂ ಶಾಲೆಗೆ ಕಳುಹಿಸುವುದಿಲ್ಲ ಎಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮಕ್ಕಳು ನಡೆದು ಬರುವ ರಸ್ತೆಯೂ ಅಭಿವೃದ್ಧಿ ಕಾಣದೆ ಸಂಚರಿಸಲು ಸಾಧ್ಯವಾಗದೆ ಇರುವ ಸ್ಥಿತಿ ತಲುಪಿದೆ. ರಸ್ತೆ ಅಭಿವೃದ್ಧಿಪಡಿಸಬೇಕು, ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ.