ಸಾರ್ವಜನಿಕ ಶೌಚಗೃಹದಲ್ಲಿ ವಿಡಿಯೋ ರೆಕಾರ್ಡ್

ಬಾಳೆಹೊನ್ನೂರಿನ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಗೃಹ.
ಬಾಳೆಹೊನ್ನೂರಿನ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಗೃಹ.
Published on

ಪ್ರಮುಖ ಮುಖ್ಯಾಂಶಗಳು

  • ಬಿಹಾರ ಮೂಲದ ರೋಶನ್‌ಕುಮಾರ್
  • ಯುವತಿ ಹೊರಗೆ ಓಡಿಬಂದು
 ಬಾಳೆಹೊನ್ನೂರ: ಪಟ್ಟಣದ ಬಸ್ ನಿಲ್ದಾಣದ ಸಾರ್ವಜನಿಕ ಶೌಚಗೃಹದಲ್ಲಿ ಮಹಿಳೆಯರು, ಯುವತಿಯರು ಶೌಚಕ್ಕೆ ತೆರಳಿದ ವೇಳೆ ವಿಡಿಯೋ ಮಾಡುತ್ತಿದ್ದ ಶೌಚಗೃಹದ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳಿಸಿದ್ದಾರೆ. 
ಬಿಹಾರ ಮೂಲದ ರೋಶನ್‌ಕುಮಾರ್ ವಿಡಿಯೋ ಮಾಡುತ್ತಿದ್ದ ಆರೋಪಿ. ಬಿ.ಕಣಬೂರು ಗ್ರಾಪಂನ ಪಟ್ಟಣದ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಗೃಹವನ್ನು ಶುಚಿ ಇಂಟರ್‌ನ್ಯಾಶನಲ್ ಎಂಬ ಸಂಸ್ಥೆಗೆ ನಿರ್ವಹಣೆಗೆ ವಹಿಸಿಕೊಟ್ಟಿದ್ದು, ಬಿಹಾರ ಮೂಲದ ಸಿಬ್ಬಂದಿ ಇದರ ನಿರ್ವಹಣೆ ಮಾಡುತ್ತಿದ್ದಾರೆ.
ಬುಧವಾರ ಬೆಳಗ್ಗೆ ಕಾಲೇಜು ಯುವತಿಯೊಬ್ಬಳು ಶೌಚಗೃಹಕ್ಕೆ ತೆರಳಿದ್ದು, ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ರೋಶನ್‌ಕುಮಾರ್ ಗುಪ್ತವಾಗಿ ಮೊಬೈಲ್ ಮೂಲಕ ಮಹಿಳೆಯರ ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ತಿಳಿದು ಗಾಬರಿಗೊಂಡು ಯುವತಿ ಹೊರಗೆ ಓಡಿಬಂದು ಸ್ಥಳೀಯ ಅಂಗಡಿಯವರಿಗೆ ತಿಳಿಸಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಹಾಗೂ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿ ಮೊಬೈಲ್ ವೀಕ್ಷಿಸಿದರು. ಮೊಬೈಲ್‌ನಲ್ಲಿ ಕೆಲವು ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ವಿಡಿಯೋಗಳನ್ನು ಪೊಲೀಸರು ಡಿಲೀಟ್ ಮಾಡಿದ್ದಾರೆ. ಶೌಚಗೃಹ ನಿರ್ವಹಣೆ ಮಾಡುತ್ತಿರುವ ಶುಚಿ ಇಂಟರ್‌ನ್ಯಾಶನಲ್ ಸಂಸ್ಥೆಯ ಮುಖ್ಯಸ್ಥರನ್ನು ಠಾಣೆಗೆ ಕರೆಸಿ ಸಿಬ್ಬಂದಿಯನ್ನು ಬದಲಾಯಿಸಲು ಸೂಚಿಸಿದ್ದಾರೆ. ಸಂಸ್ಥೆಯ ಮುಖ್ಯಸ್ಥರು ಕೂಡಲೇ ಸಿಬ್ಬಂದಿ ಬದಲಾವಣೆ ಮಾಡಿ ಬೇರೆ ವ್ಯಕ್ತಿಯನ್ನು ನಿರ್ವಹಣೆಗೆ ನಿಯೋಜಿಸಿದ್ದಾರೆ.
ಕಾಲೇಜು ಯುವತಿಯ ಪಾಲಕರು ದೂರು ನೀಡಲು ನಿರಾಕರಿಸಿದ್ದು, ಪೊಲೀಸರು ಆರೋಪಿ ರೋಶನ್‌ಕುಮಾರ್‌ನಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿದ್ದಾರೆ. ಶುಚಿ ಇಂಟರ್‌ನ್ಯಾಶನಲ್ ಸಂಸ್ಥೆಗೆ ಬಿ.ಕಣಬೂರು ಗ್ರಾಪಂನಿಂದ ಪತ್ರ ಬರೆದಿದ್ದು, ಇಂಥ ಘಟನೆಗಳು ಮರುಕಳಿಸಿದಲ್ಲಿ ಶೌಚಗೃಹ ನಿರ್ವಹಣೆಯ ಕರಾರನ್ನು ರದ್ದುಗೊಳಿಸಲಾಗುವುದು ಎಂದು ಪಿಡಿಒ ಕಾಶಪ್ಪ ತಿಳಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net