ಚಿಕ್ಕಮಗಳೂರು ಜಿಲ್ಲೆಗೆ ಅನುಮೋದಿತ ಭೂ ಮಾಪಕ ಹುದ್ದೆಯ ಪೈಕಿ ಬರೋಬ್ಬರಿ ಮೂರನೇ ಒಂದು ಭಾಗದಷ್ಟು ಅಧಿಕಾರಿ ಸಿಬ್ಬಂದಿ ಹುದ್ದೆ ಖಾಲಿ ಖಾಲಿ ಒಂದು ಕಡೆಯಾದರೆ, ಕಾರ್ಯ ಒತ್ತಡದ ನಡುವೆ ಭೂ ಮಾಪಕರು ನಡೆಸಿದ ಸರ್ವೇ ಕಾರ್ಯವನ್ನು ಪರಿಶೀಲಿಸಬೇಕಾದ ಸೂಪರ್ ವೈಸರ್ ಹುದ್ದೆಗಳು ಖಾಲಿ ಇರುವುದು ಇಡೀ ಇಲಾಖೆಯ ಕಾರ್ಯವೈಖರಿಗೆ ಹಿನ್ನಡೆ ಉಂಟು ಮಾಡುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಸದ್ಯ ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಗಳಿಗೆ ಭೂಮಿಯೇ ದೊರೆಯುತ್ತಿಲ್ಲ. ಇರುವ ಸರ್ಕಾರಿ ಜಮೀನು ಗುರುತಿಸುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೇ ಕಾರ್ಯ ನಡೆಸುತ್ತಿದ್ದಾರೆ. ಇದರೊಂದಿಗೆ ಚಿಕ್ಕಮಗಳೂರು ನಗರದಲ್ಲಿ ಕೇಂದ್ರ ಸರ್ಕಾರದ ನಕ್ಷಾ ಸರ್ವೇ, ಸ್ವಾಮಿತ್ವ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರಿಗೆ ಡ್ರೋನ್ ತಂತ್ರಜ್ಞಾನದ ಮೂಲಕ ಆಸ್ತಿ ಸಮೀಕ್ಷೆ ನಡೆಸಿ, ಡಿಜಿಟಲ್ ''ಆಸ್ತಿ ಕಾರ್ಡ್'' ಅಥವಾ ಹಕ್ಕು ಪತ್ರವನ್ನು ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಚಾಲ್ತಿಯಲ್ಲಿದೆ. ಹೀಗೆ ಹಲವು ಕಾರ್ಯಕ್ರಮಗಳನ್ನು ಭೂಮಾಪನ ಇಲಾಖೆಯಿಂದ ಸರ್ವೇ ಆಗಬೇಕಾಗಿದೆ.
ಇದರೊಂದಿಗೆ ಜಮೀನುಗಳ ಸಮೀಕ್ಷೆ, ನಕ್ಷೆ ತಯಾರಿಕೆ ಮತ್ತು ದಾಖಲೆಗಳ ನಿರ್ವಹಣೆ (ಆರ್‌ಟಿಸಿ, ಮ್ಯುಟೇಶನ್), ರೈತರ ಜಮೀನಿನ ನಕ್ಷೆ, ಪಹಣಿ (ಆರ್‌ಟಿಸಿ) ಹಾಗೂ ಇನ್ನಿತರ ದಾಖಲೆ ಸಿದ್ದಪಡಿಸುವುದು. ಜತೆಗೆ ಕಂದಾಯ ಜಮೀನು, ಗೋಮಾಳ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗೆ ಸೇರಿದ ಜಮೀನು ಸರ್ವೇ ಮಾಡಿ ವರದಿ ನೀಡುವ ಕಾರ್ಯ ಮಾಡಲಿದೆ.
ಭೂ ಮಾಪನ ಇಲಾಖೆಯ ಭೂ ಮಾಪಕರು ಸರ್ವೇ ಮಾಡಿ ವರದಿ ನೀಡಿಲ್ಲ ಎಂದರೆ, ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನು ಜಮೀನಿನ ಅಳತೆಗೆ ಸಂಬಂಧಿಸಿದ ವ್ಯಾಜ್ಯಗಳು ಪರಿಹಾರವಾಗುವುದಿಲ್ಲ. ಹೀಗಾಗಿ, ಹಲವು ಕಾರ್ಯಕ್ಕೆ ಭೂಮಾಪಕರ ಹುದ್ದೆ ಖಾಲಿ ಇರುವುದು ದೊಡ್ಡ ಸವಾಲಾಗಿದೆ.