ಅಸ್ಪೃಶ್ಯತೆ-ಜಾತಿಯತೆ ಸಮಾಜ ಹೊಕ್ಕಿರುವ ಮುಳ್ಳು

ಚಿಕ್ಕಮಗಳೂರಿನ ಕಡೂರು ನಿವಾಸದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್‌ ಹಾಗೂ ಬಸವ ಜಯಂತ್ರಿ ಕಾರ್ಯಕ್ರಮವನ್ನು ಎಂಎಲ್‌ಸಿ ಸಿ.ಟಿ.ರವಿ ಅವರು ಅಂಬೇಡ್ಕರ್‌ ಹಾಗೂ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ಚಿಕ್ಕಮಗಳೂರಿನ ಕಡೂರು ನಿವಾಸದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್‌ ಹಾಗೂ ಬಸವ ಜಯಂತ್ರಿ ಕಾರ್ಯಕ್ರಮವನ್ನು ಎಂಎಲ್‌ಸಿ ಸಿ.ಟಿ.ರವಿ ಅವರು ಅಂಬೇಡ್ಕರ್‌ ಹಾಗೂ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾವೈಕ್ಯತೆ-ಸಾಮರಸ್ಯದ ನಿರ್ಮಾಣ ಮನೆ-ಮನಗಳಿಂದ ಆರಂಭಗೊಂಡರೆ ಸಮಾಜ ಪರಿವರ್ತನೆ ಸಾಧ್ಯ
  • ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅಭಿಮತ
ಚಿಕ್ಕಮಗಳೂರು: ಭಾವೈಕ್ಯತೆ-ಸಾಮರಸ್ಯದ ನಿರ್ಮಾಣ ಮನೆ-ಮನಗಳಿಂದ ಆರಂಭಗೊಂಡರೆ ಸಮಾಜ ಪರಿವರ್ತನೆ ಸಾಧ್ಯ.  ಅಸ್ಪೃಶ್ಯತೆ ಮತ್ತು ಜಾತಿಯತೆ ಸಮಾಜಕ್ಕೆ ಹೊಕ್ಕಿರುವ ಮುಳ್ಳು ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಪಟ್ಟರು.
ನಗರದ ವಿದ್ಯಾನಗರದ ‘ಕಡೂರು ನಿವಾಸ’ದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ‘ಬಸವ ಜಯಂತಿ’ಯನ್ನು ಉದ್ಘಾಟಿಸಿ ಮಾತನಾಡಿದರು.
ಇಬ್ಬರು ಮಹಾಪುರುಷರು ಸಮಾಜ ಸುಧಾರಣೆಗೆ ಶ್ರಮಿಸಿದವರು. ಸಾಮರಸ್ಯ ಸದ್ಭಾವನೆಗಳನ್ನೆ ಪ್ರತಿಪಾದಿಸಿದವರು. ಇವರ ಜಯಂತಿಯನ್ನು ಮನೆಗಳಲ್ಲಿ ಸಂಭ್ರಮಿಸುವುದು ಸತ್‌ಸಂಪ್ರದಾಯ. ಸಮಾಜ ಪರಿವರ್ತನೆಗೆ ಮನೆಗಳಲ್ಲಿ ಸಂಸ್ಕಾರ ಕೊಡುವ ಕೆಲಸ ಆಗಬೇಕಾಗಿದೆ ಎಂದರು.
ಕಾನೂನಿನ ಮೂಲಕ ವ್ಯವಸ್ಥೆಯನ್ನು ಬದಲಾವಣೆ ಮಾಡಬಹುದು.  ಅಸ್ಪೃಶ್ಯತಾ ಕಾಯ್ದೆ ಜಾರಿಯಲ್ಲಿರುವುದರಿಂದ ಅಸ್ಪೃಶ್ಯತೆ ಅಪರಾಧವೆನಿಸುತ್ತದೆ.  ಹೋಟೇಲ್, ಬಸ್ಸು, ಮುಜರಾಯಿ ದೇವಸ್ಥಾನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯತೆ ಆಚರಣೆ ನಗಣ್ಯವೆನಿಸಿದೆ.  ತಿಳಿದು ತಿಳಿಯದೆಯೋ ಆಚರಿಸಿದರೆ ಶಿಕ್ಷೆಗೊಳಪಡಬೇಕಾಗುತ್ತದೆ.  ಕೇವಲ ಕಾನೂನುಗಳಿಂದಷ್ಟೆ ಸಮಾಜದ ಪರಿಪೂರ್ಣ ಸುಧಾರಣೆ, ಸಾಮರಸ್ಯ, ಸದ್ಭಾವನೆ ಕಷ್ಟಸಾಧ್ಯ ಎಂದು ನುಡಿದರು.
ಕಾಲಿಗೆ ಮುಳ್ಳು ಹೊಕ್ಕರೆ ಶರೀರವೇ ನೋವು ಅನುಭವಿಸುತ್ತದೆ. ನರ ತಕ್ಷಣವೇ ಮೆದುಳಿಗೆ ಸಂದೇಶ ರವಾನಿಸಿ, ಕಣ್ಣುಗಳು ಪತ್ತೆ ಹಚ್ಚುತ್ತವೆ.  ಬಾಯಿಯಿಂದ ‘ಅಮ್ಮಾ’ ಉದ್ಘಾರ ಹೊರ ಬರುತ್ತದೆ.  ಕೈ ಕ್ಷಣಾರ್ಧದಲ್ಲಿ ಮುಳ್ಳು ಕೀಳುವ ಕೆಲಸ ಮಾಡುತ್ತದೆ.  ಅಂಗಾಂಗಗಳಲ್ಲಿ ಅಸಹಕಾರ ಉಂಟಾದರೆ ಕಾಲಿಗೆ ಹೊಕ್ಕ ಮುಳ್ಳು ಬಾವು-ಕೀವು ಆವರಿಸುತ್ತದೆ ಮತ್ತೂ ನಿರ್ಲಕ್ಷಿಸಿದರೆ ಗ್ಯಾಂಗರಿನ್‌  ಆವರಿಸುತ್ತದೆ. ಇನ್ನೂ ಮುಂದೆ ಸಾವೂ ಸಂಭವಿಸುತ್ತದೆ.  ಅಂಗಾಂಗ ಭಾವದ ಸಾಮರಸ್ಯ ಸಮಾಜದಲ್ಲೂ ಮೂಡಿಸಲು ಶ್ರಮಿಸಬೇಕಾಗಿದೆ ಎಂದರು.
ನಮ್ಮಲ್ಲಿದ್ದ ಪುರಾತನ ವರ್ಣಾಶ್ರಮದ ವ್ಯವಸ್ಥೆ ವೃತ್ತಿಯ ಗುಣಗಳನ್ನು ಆಧರಿಸಿತ್ತು.  ಜಗತ್ತಿನಲ್ಲಿರುವ ಸರ್ವರೂ ಒಂದೇವೃತ್ತಿಯನ್ನು ಅನುಸರಿಸಲಾಗದು.  ಕೃಷಿಕ, ಬಡಗಿ, ಕುಂಬಾರ, ನೇಕಾರಿಕೆ ಸೇರಿದಂತೆ ವೈವಿಧ್ಯಮಯ ವೃತ್ತಿಗಳಿತ್ತು.  ಜ್ಞಾನರ್ಜನೆ ಮಾಡಿ ಅಧ್ಯಯನ-ಅಧ್ಯಾಪನ ಮಾಡುವವರೂ ಅಗತ್ಯವಿದೆ.  ಈ ಪದ್ಧತಿ ಸಾವಿರಾರು ವರ್ಷ ಮುನ್ನಡೆಸಿತ್ತು.  ಪರಸ್ಪರ ವೃತ್ತಿ ನಿರತರಲ್ಲಿ ಗೌರವವಿತ್ತು.  ಆಸಕ್ತಿಗೆ ಅನುಗುಣವಾಗಿ ವೃತ್ತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇತ್ತು. ‘ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದರು.  
ಗುಣ-ಸ್ವಭಾವ ಆಧರಿಸಿ ವಿಂಗಡಿಸಿ ಚಾರ್ತುವರ್ಣವ್ಯವಸ್ಥೆ ನಮ್ಮಲ್ಲಿತ್ತು.  ಯಾವುದು ಮೇಲುಕೀಳು ಆಗಿರಲಿಲ್ಲ.  ವೃತ್ತಿಗಳು ಕ್ರಮೇಣ ಜಾತಿಗಳಾಯಿತು.  ಜಾತಿಗಳಲ್ಲಿ ಶ್ರೇಷ್ಠ-ಕನಿಷ್ಠ ಭಾವ ಸೃಷ್ಟಿಯಾಗಿದ್ದು ದುರ್ದೈವ.  ಎಲ್ಲವೂ ದೇವರಸೃಷ್ಟಿ ಅಂದಮೇಲೆ ಮನುಷ್ಯರ ನಡುವೆ ಉಚ್ಛ-ನೀಚಾ ಭಾವವೇ ತಪ್ಪು.  ನಮ್ಮ ಎಲ್ಲ ಋಷಿಮುನಿಗಳು ಬೇರೆ ಬೇರೆ ಜಾತಿಗೆ ಸೇರಿದವರು.  ನಮ್ಮ ದೇಶದ ಎಲ್ಲ ಜ್ಞಾನಿ-ಮಹಾಪುರುಷರು ಅಸ್ಪೃಶ್ಯತೆ-ಜಾತಿಯತೆ ಪ್ರತಿಪಾದಿಸದೆ ಭಾವೈಕ್ಯತೆಯನ್ನೆ ಹೇಳಿದ್ದಾರೆ.  ಶಂಕರಾಚಾರ್ಯರು ಚಾಂಡಾಲನಲ್ಲೂ ದೇವರನ್ನು ಕಂಡವರು. ಬಸವ-ರಾಮಾನುಜ-ಮಧ್ವ-ಕನಕ ಸೇರಿದಂತೆ ಎಲ್ಲ ಮಹಾನೀಯರೂ ಅಜ್ಞಾನದ ಕತ್ತಲೆಯನ್ನು ದೂರವಾಗಿಸಲು ಶ್ರಮಿಸಿದವರು ಎಂಧರು.
ಜಗತ್ತಿನ ಕಲ್ಯಾಣವನ್ನು ಪ್ರತಿಪಾದಿಸಿದ ದೇಶ ನಮ್ಮದು.  ಸನಾತನ ಮೌಲ್ಯಗಳಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಸ್ಪೃಶ್ಯತೆ-ಜಾತಿಯತೆ ನಾವು ತೊರೆದರೆ ಅಷ್ಟರಮಟ್ಟಿಗೆ ಸಮಾಜದ ಹೊರೆ ಕಡಿಮೆಯಾಗುತ್ತದೆ ಎಂದರು.  
ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್.ಪ್ರೇಮಕುಮಾರ್ ಪ್ರಧಾನ ಉಪನ್ಯಾಸ ನೀಡಿ, ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಹೆಸರು ಹೇಳುವ ಕಾಂಗ್ರೇಸ್ ಅವರನ್ನು ಸಂವಿಧಾನ ಸಭೆಗೆ ಗೆದ್ದುಬರಲು ಅಡ್ಡಿಪಡಿಸಿತ್ತು.  ಸಮಾನ ಅವಕಾಶ ಎಲ್ಲರಿಗೂ ಸಿಗಬೇಕೆಂಬ ಅಂಬೇಡ್ಕರ್ ವಾದಕ್ಕೆ ಎಂದೂ ಸ್ಪಂದಿಸದೆ ಕೇವಲ ರಾಜಕಾರಣಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿ ಜಗತ್ತುಕಂಡ ಅಪರೂಪದ ಜ್ಞಾನಿ ಅಂಬೇಡ್ಕರ್.  ಅವರನ್ನು ಕುಬ್ಜ-ಕಬ್ಜ ಮಾಡಿಕೊಳ್ಳುವ ಹುನ್ನಾರ ನಡೆದಿದ್ದರೂ ವಜ್ರದೊಪಾದಿಯಲ್ಲಿ ಅತಿಹೆಚ್ಚು ಪುತ್ಥಳಿ, ಬಡಾವಣೆ, ರಸ್ತೆಗಳಿಗೆ ಅಂಬೇಡ್ಕರ್ ಹೆಸರು ರಾರಾಜಿಸುತ್ತಿದೆ.  ಜಗತ್ತಿನ ಅತಿಹೆಚ್ಚು ವಿಶ್ವವಿದ್ಯಾನಿಲಯಗಳಲ್ಲಿ ಮಹಾಪ್ರಬಂಧ ರಚಿಸಿ ಪಿಎಚ್‌ಡಿ ಪಡೆದ ಅಂಬೇಡ್ಕರ್ ಜನ್ಮದಿನವನ್ನು ವಿಶ್ವಸಂಸ್ಥೆ ಜ್ಞಾನದಿನವಾಗಿ ಘೋಷಿಸಿದೆ ಎಂದರು.  
ವಿದ್ಯುತ್ ಗುತ್ತಿಗೆದಾರ ರುದ್ರೇಶ್‌ಕಡೂರ್ ಮಾತನಾಡಿ, ಮಹಾಪುರುಷರ ಜನ್ಮದಿನವನ್ನು ಮನೆಯಂಗಳದಲ್ಲಿ ಸ್ನೇಹಿತರೊಂದಿಗೆ ಆಚರಿಸಲಾಗುತ್ತಿದೆ.  ಅವರ ಆದರ್ಶಗಳು ನಮ್ಮ ಬಾಳಿನ ದಾರಿದೀಪವಾಗಬೇಕು ಎಂದು ಹೇಳಿದರು.
ನಗರಸಭಾ ಮಾಜಿ ಸದಸ್ಯ ಕುಮಾರ, ಪ್ರಮುಖರಾದ ಎಂ.ಎಸ್.ನಾಗರಾಜ್, ಬಾಳೆಹಳ್ಳಿಪರಮೇಶ್, ಯಶೋಧ, ನಿರೀಕ್ಷಾ ನೇತೃತ್ವದಲ್ಲಿ ಅಂಬೇಡ್ಕರ್ ಮತ್ತು ಬಸವಣ್ಣನವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net