ಇಬ್ಬರು ಅಸ್ಸಾಂ ಕಾರ್ಮಿಕರ ಮೇಲೆ ಎರಡು ಚಿರತೆ ದಾಳಿ

 ಗೌತುವಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಚಿರತೆ ದಾಳಿಯಿಂದ ಗಾಯಗೊಂಡ ಇಬ್ಬರು ಮಹಿಳೆಯರು.
ಗೌತುವಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಚಿರತೆ ದಾಳಿಯಿಂದ ಗಾಯಗೊಂಡ ಇಬ್ಬರು ಮಹಿಳೆಯರು.
Published on

ಪ್ರಮುಖ ಮುಖ್ಯಾಂಶಗಳು

  • ಗೌತುವಳ್ಳಿ ಸಮೀಪದ ತೋಟದಲ್ಲಿ ಘಟನೆ
  • ಬೋನು ಇರಿಸಿದ ಅರಣ್ಯ ಇಲಾಖೆ
  • ಮನೆಯಿಂದ ಹೊರಬಾರದಂತೆ ಸೂಚನೆ
ಮೂಡಿಗೆರೆ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಕಾರ್ಮಿಕರಿಬ್ಬರ ಮೇಲೆ ಎರಡು ಚಿರತೆಗಳು ದಾಳಿ ನಡೆಸಿದ್ದರಿಂದ ಇಬ್ಬರು ಮಹಿಳಾ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಗೌತುವಳ್ಳಿಯ ತೋಟವೊಂದರಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಅಸ್ಸಾಂ ಮೂಲದ ಕಾರ್ಮಿಕರಾದ ಸಬೀನಾ(30), ಸುಲ್ತಾನ(45) ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಏಕಾಏಕಿ ಬಂದ ಎರಡು ಚಿರತೆಗಳು ಇವರ ಮೇಲೆ ಏಕಾಏಕಿ ದಾಳಿ ನಡೆಸಿ ಇಬ್ಬರ ಕಾಲನ್ನೂ ಕಚ್ಚಿ ಎಳೆದಾಡಿವೆ. ಚಿರತೆ ಕಚ್ಚಿದ ರಭಸಕ್ಕೆ ಇಬ್ಬರು ಮಹಿಳೆಯರ ಕಾಲಿಗೆ ಗಂಭೀರ ಗಾಯವಾಗಿದೆ. ಇತರ ಕಾರ್ಮಿಕರು ಕೂಗಿಕೊಂಡಿದ್ದರಿಂದ ಚಿರತೆ ಅಲ್ಲಿಂದ ಬೇರೆ ಕಡೆಗೆ ಓಡಿದೆ. ಕಾರ್ಮಿಕರು ಕೂಡಲೇ ತೋಟದ ಮಾಲೀಕರಿಗೆ ವಿಷಯ ತಿಳಿಸಿ, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಎಲಿಫಂಟ್ ಟಾಸ್ಕ್‌ಫೋರ್ಸ್ ಮತ್ತು ಅರಣ್ಯ ಇಲಾಖೆಯ 20 ಸಿಬ್ಬಂದಿ ಗೌತುವಳ್ಳಿ ಗ್ರಾಮದ ಎಲ್ಲ ತೋಟಗಳಲ್ಲಿ ಕೂಂಬಿಂಗ್ ನಡೆಸುತ್ತಿದ್ದಾರೆ. ದಾಳಿ ನಂತರ ಚಿರತೆಗಳು ಓಡುವಾಗ ಸ್ಥಳೀಯರಿಬ್ಬರು ಚಿರತೆ ನೋಡಿದ್ದಾರೆ. ನಂತರ ಚಿರತೆ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ.
ಚಿರತೆ ದಾಳಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ. ಸೋಮವಾರ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಿಲ್ಲ. ಕಾರ್ಮಿಕರು ಕೆಲಸಕ್ಕೆ ಹೋಗಿಲ್ಲ. ಸಾರ್ವಜನಿಕರು ಮನೆಯಿಂದ ಹೊರಬಂದಿಲ್ಲ. ಇದರಿಂದ ಗ್ರಾಮದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಕಾಫಿ ಮತ್ತು ಕಾಳುಮೆಣಸು ಕೊಯ್ಲಿನ ವೇಳೆ ಕಾಡುಪ್ರಾಣಿಗಳು ದಾಳಿ ನಡೆಸುತ್ತಿರುವುದರಿಂದ ರೈತರು ಮತ್ತು ಕಾರ್ಮಿಕರು ತೋಟಕ್ಕೆ ತೆರಳದಂತಾಗಿದ್ದು, ಬೆಳೆ ನೆಲಕಚ್ಚುವ ಆತಂಕ ಎದುರಾಗಿದೆ.
ಮೂಡಿಗೆರೆ ಆರ್‌ಎಫ್‌ಒ ಮಂಜುನಾಥ್ ಮಾತನಾಡಿ, ಚಿರತೆಗಳು ತಿರುಗಾಡಿದ ಜಾಗದಲ್ಲಿ ಬೋನುಗಳನ್ನು ಇಡಲಾಗಿದೆ. ಬೇಲೂರು ತಾಲೂಕು ಕಾನಹಳ್ಳಿ ಮೀಸಲು ಅರಣ್ಯದಿಂದ ಭಾನುವಾರ ರಾತ್ರಿ ಎರಡು ಚಿರತೆ ತಾಲೂಕಿಗೆ ಪ್ರವೇಶಿಸಿದೆ ಎನ್ನಲಾಗಿದೆ. ಗೌತುವಳ್ಳಿ, ಕಸ್ಕೆಬೈಲ್, ಹುಲಿಹಂಡ್ಲು ಎಸ್ಟೇಟ್, ಕಲ್ಲುಗುಡ್ಡ, ಚಟ್ಟನಹಳ್ಳಿ, ಕಮ್ಮರಗೋಡು, ಗಾಡಿಚೌಕ, ಕಾರಬೈಲ್, ಮೂಡಸಸಿ, ಕನ್ನಾಪುರ, ಮಾಕೋನಹಳ್ಳಿ, ಚುಂಗನಹಳ್ಳಿ, ಮಳಲುಕೆಸಿ, ಕಣದೂರು ಗ್ರಾಮಗಳ ಸುತ್ತಮುತ್ತಲಿನ ತೋಟಗಳಲ್ಲಿ ಕಾರ್ಮಿಕರು ಕೆಲಸ ಮಾಡಬಾರದು. ಗ್ರಾಮಸ್ಥರು, ವಾಹನ ಸವಾರರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net