ಕಡೂರಿನಲ್ಲಿ ತುಮ್ಕೋಸ್ ಶಾಖೆ ಆರಂಭ

ಎಚ್.ಎಸ್. ಶಿವಕುಮಾರ್)
ಎಚ್.ಎಸ್. ಶಿವಕುಮಾರ್)
Published on
ಕಡೂರು: ರೈತರ ಉತ್ಪನ್ನಗಳಿಗೆ ನ್ಯಾಯಯುತ ಮಾರುಕಟ್ಟೆ ಬೆಲೆಯೊಂದಿಗೆ ಆರ್ಥಿಕ ಭದ್ರತೆ ಹಾಗೂ ಕೃಷಿ ಸಂಬಂಧಿತ ವಿವಿಧ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಥಾಪಿತವಾಗಿರುವ ತುಮ್ಕೋಸ್ ಸಂಸ್ಥೆಯು 9ನೇ ಶಾಖೆಯನ್ನು ಕಡೂರಿನಲ್ಲಿ ಜು.9ರಂದು ಕಾರ್ಯಾರಂಭ ಮಾಡಲಿದೆ ಎಂದು ಸಂಸ್ಥೆ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ತಿಳಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಎಂಆರ್‌ಎಂ ಕಾಂಪೌಂಡ್ ಆವರಣದಲ್ಲಿರುವ ನೂತನ ಶಾಖಾ ಕಚೇರಿಯಲ್ಲಿ ಬುಧವಾರ ವಿಜಯವಾಣಿಯೊಂದಿಗೆ ಮಾತನಾಡಿ, ಕರ್ನಾಟಕದ ಪ್ರಮುಖ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರ ಸಹಕಾರ ಸಂಘಗಳಲ್ಲಿ ಇದೂ ಒಂದಾಗಿದೆ. ಈ ಸಂಸ್ಥೆಯನ್ನು 1984ರಲ್ಲಿ ಸಹಕಾರ ಕ್ಷೇತ್ರದ ಮುತ್ಸದ್ದಿ ಆರ್.ಮರುಳಪ್ಪ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ರಾಜ್ಯದ ಮಾದರಿ ಸಹಕಾರ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಸಂಘದ ಮುಖ್ಯ ಕಚೇರಿಯು ಚನ್ನಗಿರಿಯಲ್ಲಿದ್ದು, ಕಾರ್ಯವ್ಯಾಪ್ತಿಯನ್ನು ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ ಸಂಘವು 18,120ಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು ಚನ್ನಗಿರಿ, ಸಂತೇಬೆನ್ನೂರು, ತಾವರೆಕೆರೆ, ಸಾಗರಪೇಟೆ, ಹೊಳಲ್ಕೆರೆ, ತರೀಕೆರೆ, ಅರಹತೊಳಲುಕೈಮರ, ಹೊನ್ನಾಳಿ ಶಾಖೆಗಳ ಮೂಲಕ ರೈತರಿಗೆ ಸೇವೆ ಒದಗಿಸಲಾಗುತ್ತಿದೆ ಎಂದರು.
ಈಗಾಗಲೇ ಸಹಕಾರ ಕ್ಷೇತ್ರದಲ್ಲಿ ನೀಡಿದ ಅತ್ಯುತ್ತಮ ಸೇವೆ ಪರಿಗಣಿಸಿ 2007ರ ಸಹಕಾರ ಶತಮಾನೋತ್ಸವದ ಅಂಗವಾಗಿ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ತುಮ್‌ಕೋಸ್ ಪಡೆದುಕೊಂಡಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ಪ್ರಧಾನವಾಗುವ ಲಕ್ಷ್ಮಣ್ ರಾವ್ ಇನಾಮ್ದಾರ್ ರಾಷ್ಟ್ರೀಯ ಸಹಕಾರ ಶ್ರೇಷ್ಠತಾ ಪ್ರಶಸ್ತಿ 2017ರಲ್ಲಿ ದೊರೆತಿದೆ ಎಂದರು. 
ಕೃಷಿಕ ವರ್ಗಕ್ಕೆ ನೆರವಾಗುವ ನಿಟ್ಟಿನಲ್ಲಿ ರಸಗೊಬ್ಬರ, ಬೆಳೆ ಸಂರಕ್ಷಣಾ ಉತ್ಪನ್ನಗಳು, ಪಿವಿಸಿ, ಎಚ್‌ಡಿಪಿಇ ಹಾಗೂ ಜಿಐ ಪೈಪ್‌ಗಳು, ಹನಿ ನೀರಾವರಿ ವ್ಯವಸ್ಥೆಗಳು, ಕೃಷಿ ಉಪಕರಣಗಳು, ಯಂತ್ರೋಪಕರಣಗಳು, ಸ್ಪ್ರೇಯರ್ ಮತ್ತು ಪಂಪ್‌ಗಳು, ಸೂಪರ್ ಮಾರ್ಕೆಟ್, ಪೆಟ್ರೋಲ್ ಬಂಕ್‌ನ ಸೇವೆಗಳು, ಮಣ್ಣಿನ ಪರೀಕ್ಷೆ, ಬೆಳೆ ಸಲಹಾ ಸೇವೆಗಳು, ಸದಸ್ಯರಿಗೆ ಸಂಸ್ಕರಣಾ ಸಾಲ, ಅಡಿಕೆ ಅಡಮಾನ ಸಾಲ ಸೌಲಭ್ಯ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ರೈತರ ಕಲ್ಯಾಣ ಕಾರ್ಯಕ್ರಮದೊಂದಿಗೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.
ನಾಲ್ಕು ದಶಕಗಳಿಗೂ ಅಧಿಕ ಅವಧಿಯಿಂದ ತುಮ್ಕೋಸ್ ಪಾರದರ್ಶಕತೆ ಮೂಲಕ ಗುಣಮಟ್ಟದ ಸೇವೆ ಹಾಗೂ ಸಹಕಾರ ತತ್ವಗಳನ್ನು ಆಧಾರವಾಗಿಟ್ಟುಕೊಂಡು ರೈತರ ಆರ್ಥಿಕ ಸಬಲೀಕರಣಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರ ಅಭಿವೃದ್ಧಿ, ಕೃಷಿಯ ಪ್ರಗತಿ ಹಾಗೂ ಗ್ರಾಮೀಣ ಆರ್ಥಿಕ ಸಬಲೀಕರಣಕ್ಕೆ ತನ್ನ ಅಮೂಲ್ಯ ಕೊಡುಗೆಯನ್ನು ನೀಡುತ್ತಿದೆ ಎಂದರು. ತುಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಎನ್.ಪಿ. ಮಧು  ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net