ಕಾಫಿನಾಡಿಗೆ ಹರಿದುಬಂದ ಪ್ರವಾಸಿಗರ ದಂಡು

ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನ ಗಿರಿಯಲ್ಲಿ ವಾಹನಗಳು ಜಾಮ್‌ ಆಗಿರುವುದು.
ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನ ಗಿರಿಯಲ್ಲಿ ವಾಹನಗಳು ಜಾಮ್‌ ಆಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾಲು-ಸಾಲು ರಜೆಗಳ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ತಪ್ಪಲಿಗೆ ಪ್ರವಾಸಿಗರ ಸಾಗರ
  • ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಗಾಳಿಕೆರೆಯಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಜನಜಾತ್ರೆ
ಚಿಕ್ಕಮಗಳೂರು: ಸಾಲು-ಸಾಲು ರಜೆಗಳ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ತಪ್ಪಲಿಗೆ ಪ್ರವಾಸಿಗರ ಸಾಗರವೇ ಹರಿದುಬಂದಿದೆ. ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಗಾಳಿಕೆರೆಯಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಜನಜಾತ್ರೆ ಕಂಡುಬಂದಿದ್ದು, ಪ್ರಕೃತಿ ಸೌಂದರ್ಯ ಸವಿಯಲು ಬಂದ ಪ್ರವಾಸಿಗರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುವಂತಾಗಿದೆ.
ವೀಕೆಂಡ್ ಹಾಗೂ ಸರಣಿ ರಜೆಗಳ ಕಾರಣದಿಂದಾಗಿ ಗಿರಿಭಾಗಕ್ಕೆ ಏಕಾಏಕಿ ಸಾವಿರಾರು ಪ್ರವಾಸಿ ವಾಹನಗಳು ಲಗ್ಗೆ ಇಟ್ಟಿವೆ. ಮುಳ್ಳಯ್ಯನಗಿರಿಯ ಕಿರಿದಾದ ರಸ್ತೆಯಲ್ಲಿ ಒಂದೇ ಬಾರಿಗೆ ಸಾವಿರಕ್ಕೂ ಹೆಚ್ಚು ಕಾರುಗಳು ನುಗ್ಗಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಖ್ಯವಾಗಿ ಪಂಡರವಳ್ಳಿ ಹಾಗೂ ಸೀತಾಳಯ್ಯನಗಿರಿ ಭಾಗದಲ್ಲಿ ವಾಹನಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದು, ಬೆಳಗ್ಗೆಯಿಂದಲೇ ಪ್ರವಾಸಿಗರು ಟ್ರಾಫಿಕ್‌ನಿಂದ ಹೊರಬರಲಾರದೆ ಹೈರಾಣಾಗಿದ್ದಾರೆ.
ಈ ಅವಾಂತರಕ್ಕೆ ಪ್ರವಾಸೋದ್ಯಮ ಇಲಾಖೆಯ ಯಡವಟ್ಟೇ ಕಾರಣ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಿರಿಭಾಗಕ್ಕೆ ವಾಹನ ದಟ್ಟಣೆ ನಿಯಂತ್ರಿಸಲು ಜಾರಿಗೆ ತರಲಾಗಿದ್ದ ಆನ್‌ಲೈನ್ ಟಿಕೆಟ್ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆನ್‌ಲೈನ್ ನಿಯಮಗಳನ್ನು ಬದಿಗೊತ್ತಿ, ಚೆಕ್‌ಪೋಸ್ಟ್‌ನಲ್ಲಿ ಒಂದು ಕಾರಿಗೆ ಬರೋಬ್ಬರಿ 1,000 ದಿಂದ 1,500 ರೂಪಾಯಿ ಹಣವನ್ನು ಅಕ್ರಮವಾಗಿ ಪಡೆದು ಪ್ರವಾಸಿ ವಾಹನಗಳನ್ನು ಗಿರಿಭಾಗಕ್ಕೆ ಬಿಡಲಾಗುತ್ತಿದೆ. ಈ ಹಣದ ಹಪಾಹಪಿತನದಿಂದಾಗಿ ಇಂದು ಸಾವಿರಾರು ಜನರು ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿರಿದಾದ ರಸ್ತೆ ಹಾಗೂ ಅತಿಯಾದ ವಾಹನಗಳ ದಟ್ಟಣೆಯಿಂದಾಗಿ ಇಡೀ ಗಿರಿಪ್ರದೇಶ ಧೂಳು ಮತ್ತು ಹಾರ್ನ್‌ಗಳ ಸದ್ದಿನಿಂದ ತುಂಬಿಹೋಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮತ್ತು ಟ್ರಾಫಿಕ್ ಕ್ಲಿಯರ್ ಮಾಡಲು ಸ್ಥಳೀಯ ಪೊಲೀಸರು ಹಾಗೂ ಚೆಕ್‌ಪೋಸ್ಟ್ ಸಿಬ್ಬಂದಿ ತೀವ್ರ ಹರಸಾಹಸ ಪಡುತ್ತಿದ್ದಾರೆ. ಆದರೆ ವಾಹನಗಳ ಸಂಖ್ಯೆ ಮಿತಿಮೀರಿರುವುದರಿಂದ ಸಂಚಾರ ಸುಗಮಗೊಳಿಸುವುದು ಸವಾಲಾಗಿ ಪರಿಣಮಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net