ಹ್ಯಾರಂಬಿ ಪುರದಲ್ಲಿ ಭಾನುವಾರ ರಾತ್ರಿ ಹಾವೇರಿ ಮೂಲದ ಕಾರ್ಮಿಕನೊಬ್ಬನನ್ನು ಕಾಡಾನೆ ತುಳಿದು ಸಾಯಿಸಿದ ಘಟನೆ ಬೆನ್ನಲ್ಲೇ ಪುರ ಗ್ರಾಮದ ಕಾಫಿ ತೋಟವೊಂದರಲ್ಲಿ ಮೂರು ಕಾಡಾನೆಗಳು ಒಟ್ಟಿಗೆ ಕಂಡುಬಂದಿದ್ದು, ಕಾರ್ಮಿಕನನ್ನು ತುಳಿದು ಸಾಯಿಸಿದ ಆನೆ ಇದೇ ಇರಬಹುದು ಎಂದು ಶಂಕಿಸಿದ್ದಾರೆ. ಆನೆ ಪ್ರತ್ಯಕ್ಷವಾದ ಬಳಿಕ ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು ತಮ್ಮ ನಿತ್ಯದ ಕೆಲಸಗಳಿಗೆ ತೆರಳಲು ಹಿಂದೇಟು ಹಾಕಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇಟಿಎಫ್ (ಆನೆ ಕಾರ್ಯಪಡೆ) ಸಿಬ್ಬಂದಿ ಸ್ಥಳಕ್ಕೆ ನಿಯೋಜಿಸಲಾಗಿದ್ದು, ಆನೆ ಚಲನವಲನದ ಬಗ್ಗೆ ಗಮನಿಸಿ, ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.