ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆ ಆರಂಭಕ್ಕೆ ಚಿಂತನೆ

ಮೂಡಿಗೆರೆಯ ದಾರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಿದರು.
ಮೂಡಿಗೆರೆಯ ದಾರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಿದರು.
Published on
ಮೂಡಿಗೆರೆ: ಸಮಾಜದಲ್ಲಿ ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ದೊರೆಯುತ್ತಿದ್ದು, ಅಂತಹ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಗ್ರಾಮೀಣ ಶಾಲೆಗಳು ಮುಚ್ಚಿದರೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಆತಂಕವಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ದಾರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆ ಪ್ರಾರಂಭಿಸುವ ಚಿಂತನೆ ನಡೆದಿದೆ. ಈಗ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಕಾಣುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಶೈಕ್ಷಣಿಕ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ದೂರದಿಂದ ಬರುವ ಮಕ್ಕಳಿಗೆ ಬಸ್‌ಪಾಸ್, ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಹಾಲು, ಶಾಲಾ ಬ್ಯಾಗ್ ಸೇರಿದಂತೆ ಹಲವು ಪರಿಕರಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಮುಂದಾಗಬೇಕು. ಪಾಲಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ವಿಧಾನಸೌಧ ನಿರ್ಮಿಸಿದ ಕೆಂಗಲ್ ಹನುಮಂತಯ್ಯ ಅವರು ಈ ಶಾಲೆ ಉದ್ಘಾಟಿಸಿರುವುದು ಚಾರಿತ್ರಿಕ ವಿಚಾರ. ರಾಜ್ಯದಲ್ಲಿ ವರ್ಷಕ್ಕೆ 40 ಸಾವಿರ ಕೋಟಿ ರೂ.ಅನುದಾನವನ್ನು ಶಿಕ್ಷಣಕ್ಕೆ ಖರ್ಚು ಮಾಡಲಾಗುತ್ತದೆ. 7ಲಕ್ಷಕ್ಕೂ ಅಧಿಕ ಸಿಬ್ಬಂದಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿರುವ 48 ಸಾವಿರ ಸರ್ಕಾರಿ ಶಾಲೆ ಪೈಕಿ 7 ಸಾವಿರ ಶಾಲೆ ಮುಚ್ಚುವ ಸ್ಥಿತಿಗೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಉಳಿಸಿ ಬೆಳೆಸುವ ಮೂಲಕ ಶತಮಾನೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಾಜಿ ಯೋಧರು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಾಹಿತಿಗಳಾದ ಚಟ್ನಳ್ಳಿ ಮಹೇಶ್, ಡಿ.ಸಿ.ರವಿಕುಮಾರ್, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಡಿ.ಬಿ.ಜಯಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಸ್.ರಮೇಶ್, ಕೆ.ಎಂ.ಸಿದ್ದೇಶ್, ಬ್ರಿಜೇಶ್ ಕಡಿದಾಳ್, ಡಿ.ಕೆ.ಉದಯಶಂಕರ್, ದೀಪಕ್ ದೊಡ್ಡಯ್ಯ, ಡಿ.ಬಿ.ಅಶೋಕ್, ಲಕ್ಷ್ಮಣಗೌಡ, ಡಿ.ಆರ್.ರಘುಪತಿ, ಮುಖ್ಯಶಿಕ್ಷಕಿ ಜೆ.ರೂಪ, ಮಂಜಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net