ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಈ ಪೊಲೀಸ್ ಠಾಣೆ

ಬಾಳೆಹೊನ್ನೂರು ನವೀಕೃತ ಪೊಲೀಸ್ ಠಾಣೆ.
ಬಾಳೆಹೊನ್ನೂರು ನವೀಕೃತ ಪೊಲೀಸ್ ಠಾಣೆ.
Published on

ಪ್ರಮುಖ ಮುಖ್ಯಾಂಶಗಳು

  • ಅಪರಾಧ ನಿಯಂತ್ರಣಕ್ಕೆ ಕ್ಯಾಮರಾ ಅಳವಡಿಕೆ
  • ಠಾಣೆ ನವೀಕರಣ, ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ
ಬಾಳೆಹೊನ್ನೂರು: ಪೊಲೀಸ್ ಠಾಣೆ ಎಂದರೆ ಭಯಪಡುವ, ಪೊಲೀಸ್ ಅಧಿಕಾರಿಗಳೆಂದರೆ ಜನರು ಮೂಗು ಮುರಿಯುತ್ತಾರೆ. ಇಂಥ ಸನ್ನಿವೇಶದಲ್ಲಿ ಪಟ್ಟಣ ಪೊಲೀಸ್ ಠಾಣೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರ ಹಿಂದೆ ಪಿಎಸ್‌ಐ ಶ್ರಮ ಅಪಾರ. 
ಬಾಳೆಹೊನ್ನೂರು ವೀರಶೈವರ ಪ್ರಥಮ ಪೀಠ ರಂಭಾಪುರಿ ಪೀಠವೆಂಬ ಧರ್ಮಕ್ಷೇತ್ರವಿರುವ ಪುಣ್ಯ ಕ್ಷೇತ್ರ. ಜತೆಗೆ ಹೊರನಾಡು, ಕಳಸ, ಶೃಂಗೇರಿ, ಬಸ್ತಿಮಠ, ಹರಿಹರಪುರ, ಶಕಟಪುರ, ಗೌರಿಗದ್ದೆ ಮುಂತಾದ ಧರ್ಮಕ್ಷೇತ್ರಗಳನ್ನು, ಹಲವು ಪ್ರವಾಸಿ ಕ್ಷೇತ್ರಗಳನ್ನು ಸಹ ಹೊಂದಿದೆ. ಈ ಎಲ್ಲ ಊರುಗಳಿಗೆ ಕೇಂದ್ರ ಸ್ಥಾನವಾಗಿರುವ ಬಾಳೆಹೊನ್ನೂರು ಒಂದಿಲ್ಲೊಂದು ವಿಷಯಗಳಲ್ಲಿ ರಾಜ್ಯದ ಗಮನಸೆಳೆದಿರುತ್ತದೆ. ಇಂಥ ಪ್ರದೇಶದ ಪೊಲೀಸ್ ಠಾಣೆಗೆ, ಪಟ್ಟಣಕ್ಕೆ ಈಗ ಹೈಟೆಕ್ ಸ್ಪರ್ಶ ನೀಡಲಾಗಿದೆ. 
ಪೊಲೀಸ್ ಠಾಣೆ ಜನಸ್ನೇಹಿಯಾಗಿರಬೇಕು ಎಂಬ ಉದ್ದೇಶದಿಂದ ಠಾಣೆಯನ್ನು ಆಧುನಿಕ ರೀತಿಯಲ್ಲಿ ನವೀಕರಣಗೊಳಿಸಲಾಗಿದೆ. ಠಾಣೆಗೆ ಆಗಮಿಸುವ ಸಾರ್ವಜನಿಕರು, ದೂರುದಾರರು, ಗಣ್ಯರಿಗೆ ಇದು ಠಾಣೆಯಲ್ಲ ಖಾಸಗಿ ಕಚೇರಿ, ಮನೆಯ ಹಾಗೆ ಭಾವನೆ ಮೂಡುವಂತೆ ನವೀಕರಿಸಲಾಗಿದೆ. ಠಾಣೆ ನವೀಕರಣಕ್ಕಾಗಿ ಅಂದಾಜು 40 ಲಕ್ಷ ರೂಪಾಯಿಗೂ ಅಧಿಕ ಹಣ ವ್ಯಯಿಸಲಾಗಿದ್ದು, ಶಾಸಕರ ನಿಧಿ, ಸ್ಥಳೀಯ ಗ್ರಾಪಂ ಅನುದಾನ, ಮಧುಚಂದ್ರ ಪ್ರತಿಷ್ಠಾನ ಹಾಗೂ ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿ ಬಳಸಿಕೊಳ್ಳಲಾಗಿದೆ. 
ಠಾಣೆ ಸುತ್ತಮುತ್ತಲಿನ ವಾತಾವರಣವನ್ನು ಪರಿಸರ ಪೂರಕವಾಗಿಸುವುದರೊಂದಿಗೆ ಪಾರ್ಕ್ ನಿರ್ಮಿಸಲಾಗಿದೆ. ಜತೆಗೆ ಠಾಣೆ ಸಿಬ್ಬಂದಿಯ ದೈಹಿಕ ಆರೋಗ್ಯ ಸ್ಥಿರವಾಗಿರಬೇಕು ಎಂಬ ಉದ್ದೇಶದಿಂದ ಷಟಲ್ ಕೋರ್ಟ್ ಸಹ ನಿರ್ಮಿಸಲಾಗಿದೆ. ಠಾಣೆ ಕಾಂಪೌಂಡ್‌ನ ಒಳಗೆ ಮತ್ತು ಹೊರ ಭಾಗಗಳಲ್ಲಿ ವಿವಿಧ ಅಪರಾಧ ಕೃತ್ಯಗಳ ಬಗ್ಗೆ, ಕಾನೂನಿನ ಅರಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ವಿವಿಧ ಚಿತ್ರಗಳನ್ನು ಬರೆಯಿಸಲಾಗಿದೆ. ಈ ಮೂಲಕ ಠಾಣೆಯನ್ನು ಜನಸ್ನೇಹಿಯಾಗಿಸಲಾಗಿದೆ. 
ಇನ್ನು ಪಟ್ಟಣದ ಪಾರ್ಕಿಂಗ್ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಪಂ, ಜೆಸಿಐ, ರೋಟರಿ, ಲಯನ್ಸ್, ಇನ್ನರ್‌ವ್ಹೀಲ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಪಟ್ಟಣದ ಎರಡೂ ಬದಿ ಪಾರ್ಕಿಂಗ್ ಬೋರ್ಡ್‌ಗಳನ್ನು ಅಳವಡಿಸಿ ಪ್ರತಿ ದಿನವೂ ಒಂದೊಂದು ಬದಿ ಪ್ರತ್ಯೇಕವಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಮಾರ್ಗಸೂಚಿ ಸಿದ್ಧಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ. 

ಜನರ ಮೇಲೆ ಕ್ಯಾಮರಾ ಕಣ್ಣು 

ಪಟ್ಟಣದಲ್ಲಿ ಸಾರ್ವಜನಿಕರ ಸುರಕ್ಷೆ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ್ರಕರಣಗಳ ಪತ್ತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಘ ಸಂಸ್ಥೆಗಳು, ದಾನಿಗಳ ಸಹಕಾರದಿಂದ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ 32 ಸೆಕ್ಯೂರ್ ಕ್ಯಾಮರಾಗಳನ್ನು ಅಳವಡಿಸಿದ್ದು, ಪಟ್ಟಣದ ಜೇಸಿ ವೃತ್ತ ಸೇರಿದಂತೆ ಪಟ್ಟಣದ ರೋಟರಿ ವೃತ್ತ, ಕೊಪ್ಪ ರಸ್ತೆಯ ಅರಣ್ಯ ಇಲಾಖೆ ಬಳಿ ಹಾಗೂ ರಂಭಾಪುರಿ ಪೀಠ ರಸ್ತೆ, ಎನ್.ಆರ್.ಪುರದ ರಸ್ತೆಯ ಬಳಿಯಲ್ಲಿ 6 ಅಡ್ವಾನ್ಸ್‌ಡ್ ವಿಡಿಯೋ ಅನಾಲಿಟಿಕ್ಸ್ ಹಾಗೂ ಎಎನ್‌ಪಿಆರ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆ ಹೋಬಳಿ ಕೇಂದ್ರದ ಠಾಣಾ ವ್ಯಾಪ್ತಿಯಲ್ಲಿ ಮಾಡಿರುವುದು ರಾಜ್ಯದಲ್ಲಿ ಇದೇ ಮೊದಲು. ಅಪರಾಧ ಪ್ರಕರಣಗಳನ್ನು ಹಾಗೂ ಅಪರಾಧ ಕೃತ್ಯ ನಡೆಸಿದವರನ್ನು ಶೀಘ್ರದಲ್ಲಿ ಪತ್ತೆ ಹಚ್ಚುವಲ್ಲಿ ಈ ಕ್ಯಾಮರಾಗಳು ಸಹಕಾರಿಯಾಗಲಿವೆ. ಪಟ್ಟಣದ ವಿವಿಧೆಡೆ ಹಾಕಿರುವ ಸೆಕ್ಯೂರ್ ಕ್ಯಾಮರಾಗಳ ಜತೆಯಲ್ಲಿ ಮೈಕ್ ವ್ಯವಸ್ಥೆಯನ್ನೂ ಮಾಡಲಾಗಿದೆ.

ಎರಡು ವರ್ಷದಲ್ಲಿ ಸುಧಾರಣೆ 

ಪಟ್ಟಣದಲ್ಲಿ ಪೊಲೀಸ್ ಠಾಣೆ ನವೀಕರಣ, ಸಂಚಾರ ಸಿಕ್ಕು ನಿವಾರಣೆ ಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಪಿಎಸ್‌ಐ ರವೀಶ್. ಪೊಲೀಸ್ ಠಾಣೆಗೆ 2024ರಲ್ಲಿ ಪಿಎಸ್‌ಐ ಆಗಿ ಬಂದ ರವೀಶ್ ಪೊಲೀಸ್ ಕಾರ್ಯದ ಮಧ್ಯೆ ವಿಭಿನ್ನವಾದ ಕಾರ್ಯಗಳನ್ನು ನಡೆಸಿ ಗಮನಸೆಳೆದವರು. ಪಿಎಸ್‌ಐ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಪೊಲೀಸ್ ಠಾಣೆ ಹಾಗೂ ಪಟ್ಟಣವನ್ನು ಮಾದರಿಯಾಗಿಸಬೇಕು ಎಂಬ ಸಂಕಲ್ಪದಿಂದ ಹೆಜ್ಜೆ ಇಟ್ಟು, ಆರಂಭದಲ್ಲಿ ಠಾಣೆಯನ್ನು ಜನಸ್ನೇಹಿಯಾಗಿಸುವ ಯೋಜನೆಗೆ ಚಾಲನೆ ನೀಡಿದರು. ನಂತರ ಪಟ್ಟಣದಲ್ಲಿ ಸುಧಾರಣೆ ಕ್ರಮಕೈಗೊಂಡರು. 

ಪೊಲೀಸ್ ಸಿಬ್ಬಂದಿ ಸಹ ಜನಸ್ನೇಹಿಯಾಗಿರಬೇಕು ಎಂಬುದು ಉದ್ದೇಶ. ಮುಂದಿನ ದಿನಗಳಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆ ಜಾಗದಲ್ಲಿ ಪೈಂಟ್ ಮೂಲಕ ಬಾಕ್ಸ್‌ಗಳನ್ನು ಬರೆಯಿಸಿ ಅದರೊಳಗೆ ವಾಹನಗಳು ನಿಲುಗಡೆ ಮಾಡಲು ಕ್ರಮಕೈಗೊಳ್ಳಲಾಗುವುದು. ಇದರೊಂದಿಗೆ ಸ್ವಚ್ಛ ಬಾಳೆಹೊನ್ನೂರು ಪರಿಕಲ್ಪನೆಯೂ ಇದ್ದು, ಗ್ರಾಪಂನೊಂದಿಗೆ ಸೇರಿ ಸ್ವಚ್ಛತೆಗೆ ಒತ್ತು ನೀಡಲಾಗುವುದು. ಮಾದರಿ ಬಾಳೆಹೊನ್ನೂರು ಮಾಡಲು ಜನರ ಸಹಕಾರ ಅಗತ್ಯ.

ರವೀಶ್, ಬಾಳೆಹೊನ್ನೂರು ಪಿಎಸ್‌ಐ

ಪಿಎಸ್‌ಐ ಕೋರಿಕೆಯಂತೆ ಪಾರ್ಕಿಂಗ್ ಬೋರ್ಡ್ ಅಳವಡಿಕೆ, ಷಟಲ್ ಕೋರ್ಟ್ ನಿರ್ಮಾಣ, ಇಂಟರ್‌ಲಾಕ್ ಅಳವಡಿಕೆ, ಸಿಸಿ ಕ್ಯಾಮರಾಗಳ ಅಳವಡಿಕೆಗೆ ಗ್ರಾಪಂನಿಂದ 10 ಲಕ್ಷ ರೂ. ಗೂ ಹೆಚ್ಚು ಅನುದಾನ ನೀಡಲಾಗಿದೆ. ಪಿಎಸ್‌ಐ ರವೀಶ್ ಉತ್ತಮವಾದ ಕಾರ್ಯನಿರ್ವಹಣೆಯೊಂದಿಗೆ ಮಾದರಿಯಾಗಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಪೊಲೀಸ್ ಠಾಣೆಯಿಂದ ಅನುದಾನ ಕೇಳಿದಲ್ಲಿ ಅದನ್ನು ನೀಡಲು ಬದ್ಧವಿದ್ದೇವೆ. ಸುಂದರ, ಸ್ವಚ್ಛ ಬಾಳೆಹೊನ್ನೂರು ಗ್ರಾಪಂ ಗುರಿ.

ರವಿಚಂದ್ರ, ಬಿ.ಕಣಬೂರು ಗ್ರಾಪಂ ಅಧ್ಯಕ್ಷ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net