ಚಿಕ್ಕಮಗಳೂರು: ರಾಜ್ಯ ಸಚಿವ ಸಂಪುಟ ರಚನೆ ಅತ್ಯಂತ ಮಹತ್ವದ ರಾಜಕೀಯ ಬೆಳವಣಿಗೆಯಾಗಿದ್ದು, ಹೊಸಬರಿಗೆ ಅವಕಾಶ ಕಲ್ಪಿಸುವುದು ಹಾಗೂ ಹಿರಿಯರನ್ನು ಉಳಿಸಿಕೊಳ್ಳುವ ಕುರಿತು ಕಾಂಗ್ರೆಸ್ ವರಿಷ್ಠರೇ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ ಭವನದ ಮುಂಭಾಗದಲ್ಲಿ ನಡೆದ ಘಟನೆ ಹಾಗೂ ಅದರ ಬಳಿಕದ ಪ್ರತಿಭಟನೆ ಸೇರಿದಂತೆ ಹಲವು ಬೆಳವಣಿಗೆಗಳನ್ನು ಪರಿಗಣಿಸಿ ಸಚಿವ ಸಂಪುಟದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ನಾಲ್ಕರಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ದೊರೆಯದ ಹಲವು ಹಿರಿಯ ಶಾಸಕರಿದ್ದು, ಅವರಿಗೆ ಸಹ ಅವಕಾಶ ಸಿಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಸಚಿವ ಸಂಪುಟ ರಚನೆ ವೇಳೆ ಕೆಲ ಹಳೆಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವುದು ರಾಜಕೀಯದಲ್ಲಿ ಸಹಜ ಪ್ರಕ್ರಿಯೆಯಾಗಿದೆ ಎಂದರು.
ತಮಗೆ ಯಾವುದೇ ಸ್ಥಾನಮಾನ ಅಥವಾ ಸಚಿವ ಸ್ಥಾನದ ನಿರೀಕ್ಷೆಗಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಳೆದ ಮೂರು ವರ್ಷಗಳಿಂದ ಪಕ್ಷ ನೀಡಿದ ಜವಾಬ್ದಾರಿಯನ್ನು ಶಕ್ತಿಮೀರಿ ನಿರ್ವಹಿಸಿದ್ದೇನೆ. ಮುಂದೆಯೂ ಪಕ್ಷದ ವರಿಷ್ಠರು ಯಾವ ಜವಾಬ್ದಾರಿ ನೀಡಿದರೂ ಅದನ್ನು ವಹಿಸಿಕೊಳ್ಳಲು ಸಿದ್ಧನಿದ್ದೇನೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸ್ಥಾನ ನೀಡುವ ವಿಚಾರವೂ ಪಕ್ಷದ ವರಿಷ್ಠರ ಪರಿಶೀಲನೆಯಲ್ಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಿನ್ನೆ ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಅಮಾನವೀಯ ಹಾಗೂ ಕ್ರೂರ ನಡೆ ಎಂದು ಆರೋಪಿಸಿದರು. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಾಹುಲ್ ಗಾಂಧಿ ವಿರುದ್ಧ ಅನುಸರಿಸಿದ ಕ್ರಮ ಖಂಡನೀಯವಾಗಿದ್ದು, ಕೇಂದ್ರ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು.
ಯಾರೂ ಸರ್ಕಾರವನ್ನು ಪ್ರಶ್ನಿಸಬಾರದು ಎಂಬ ಮನೋಭಾವ ಕೇಂದ್ರ ಸರ್ಕಾರದಲ್ಲಿದ್ದು, ತಮ್ಮ ವಿರುದ್ಧ ಮಾತನಾಡುವವರಿಗೆ ತೊಂದರೆ ನೀಡುವುದೇ ಅವರ ಕಾರ್ಯವಾಗಿದೆ ಎಂದು ಆರೋಪಿಸಿದರು. ಜನರ ಧ್ವನಿಯನ್ನು ಆಲಿಸದ ಪರಿಸ್ಥಿತಿಗೆ ಕೇಂದ್ರ ಸರ್ಕಾರ ತಲುಪಿದ್ದು, ದರ್ಪ ಹಾಗೂ ಅಹಂಕಾರದ ಆಡಳಿತ ನಡೆಸುತ್ತಿದೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.