ರಾಜ್ಯ ಸರ್ಕಾರ ಹಿಟ್ ವಿಕೆಟ್ ಆಗಿದೆ

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
Published on

ಪ್ರಮುಖ ಮುಖ್ಯಾಂಶಗಳು

  • ರಾಮಲಿಂಗಾರೆಡ್ಡಿ ರಾಜೀನಾಮೆ
  • ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯ
ಚಿಕ್ಕಮಗಳೂರು: ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲ ಬಾಲಿಗೆ ಸಿಕ್ಸ್ ಹೊಡೆದು ಹಿಟ್ ವಿಕೆಟ್ ಆಗಿದೆ ಎಂದು ರಾಮಲಿಂಗಾರೆಡ್ಡಿ ರಾಜೀನಾಮೆಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಸಂಪುಟದ ಮೊದಲ ವಿಕೆಟ್ ರಾಜೀನಾಮೆ ಮೂಲಕ ಪತನವಾಗಿದೆ. ಸಂಪುಟ ದರ್ಜೆಯ ಸಚಿವ, ಹಿರಿಯ ಕಾಂಗ್ರೆಸ್ಸಿಗ ರಾಜೀನಾಮೆ ನೀಡಿರುವುದು ಆಂತರಿಕವಾಗಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಇದು ಭವಿಷ್ಯದ ಬೆಳವಣಿಗೆಗಳನ್ನ ಸೂಚಿಸುತ್ತದೆ ಎಂದರು.
ನಮ್ಮ ಆತಂಕ ಇದು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದಾಗಿದೆ. ರಾಮಲಿಂಗಾರೆಡ್ಡಿ ಕೊಟ್ಟ ಮಾತು ತಪ್ಪಿದ್ದಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಯಾರು ಯಾರಿಗೆ ಮಾತು ಕೊಟ್ಟಿದ್ದರು ನಮಗೆ ಗೊತ್ತಿಲ್ಲ. ಜನರಿಗೆ ಗೊತ್ತಾಗಿರುವುದು ಮಾತ್ರ ರಾಜಿನಾಮೆ ನೀಡಿರುವುದು ಎಂದು ಹೇಳಿದರು.
ಇದೆಲ್ಲವೂ ಆಂತರಿಕ ಬೇಗುದಿ ಅಷ್ಟೆ. ಜೊತೆಗೆ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹಣಕಾಸಿನ ಪರಿಸ್ಥಿತಿಗೆ ಕನ್ನಡಿ ಹಿಡಿದಿರೋದು, ರಾಮಲಿಂಗಾರೆಡ್ಡಿ ರಾಜೀನಾಮೆ ಇವೆಲ್ಲಾ ಭವಿಷ್ಯದ ಮುನ್ಸೂಚನೆ ಕೊಡುತ್ತಿವೆ. ಇವೆಲ್ಲಾ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಎಂದು ಭಾವಿಸುವಂತಿಲ್ಲ ಎಂದರು.
ಇನ್ನು ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚನೆಯೇ ಆಗಿಲ್ಲ. ಈಗಲೇ ಹಿರಿಯ ಸಚಿವರಲ್ಲೇ ಈ ರೀತಿಯ ಆಂತರಿಕ ಬೇಗುದಿ ಇರುವಾಗ ಪೂರ್ಣ ಪ್ರಮಾಣದಲ್ಲಿ ಸಂಪುಟ ರಚನೆಯಾದಾಗ ಅದು ಸ್ಫೋಟವಾಗುತ್ತದೆ ಎಂದು ಭವಿಷ್ಯ ನುಡಿದರು.
ಬಣ ರಾಜಕೀಯ ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಅದು ಬೇರೆ ಪ್ರಶ್ನೆ. ಆದರೆ ಆ ಬಣ ರಾಜಕೀಯ ರಾಜ್ಯ ಹಾಗೂ ಪಕ್ಷದ ಹಿತವನ್ನ ಮೀರಬಾರದು. ಆ ಸ್ಪರ್ಧೆ ರಾಜಕೀಯ ಹಿತವನ್ನೂ ಮೀರಬಾರದು. ಮೀರಿದರೆ ರಾಜ್ಯ-ಆಡಳಿತದ ಮೇಲೆ ಪರಿಣಾಮ ಬೀರುತ್ತೆ ಎಂದು ತಿಳಿಸಿದರು.
ಫೋಟೋ: ೫ ಸಿಕೆಎಂ ೧ ಸಿ.ಟಿ.ರವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net