

ಪ್ರಮುಖ ಮುಖ್ಯಾಂಶಗಳು
ಬಾಳೆಹೊನ್ನೂರು: ವಿಶ್ವದ ನಿಜವಾದ ಜೀವಂತಿಕೆ ಇರುವುದು ಹಿಂದು ಧರ್ಮದಲ್ಲಿ ಮಾತ್ರ ಎಂದು ಚಿಕ್ಕಮಗಳೂರು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ 33ನೇ ವರ್ಷದ ಅನ್ನದಾನ, ದೀಪೋತ್ಸವ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಎಲ್ಲ ತತ್ವವನ್ನು ಒಪ್ಪುವುದೇ ನಿಜವಾದ ಸನಾತನ ಧರ್ಮ. ಪರಮಾತ್ಮ, ಜೀವಾತ್ಮ, ಜಗತ್ತು ಸನಾತನ ಧರ್ಮದ ಮೂಲವಾಗಿದೆ. ನಮ್ಮ ಮಕ್ಕಳಿಗೆ ಪರಂಪರೆ, ಸಂಸ್ಕೃತಿ, ಸನಾತನ ಧರ್ಮದ ಬಗ್ಗೆ ತಿಳಿಸಬೇಕಿದ್ದು, ಸನಾತನ ಧರ್ಮ ಯಾವುದೇ ಧರ್ಮವನ್ನು ದ್ವೇಷಿಸುವುದನ್ನು ಬೋಧಿಸಿಲ್ಲ ಎಂಬುದನ್ನು ತಿಳಿಸಬೇಕಿದೆ ಎಂದರು.
ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಮಾತನಾಡಿ, ದೇವಾಲಯಗಳಲ್ಲಿನ ಆಚರಣೆಗಳಿಂದ ನಮ್ಮ ಸಂಸ್ಕೃತಿ ಉಳಿದಿದ್ದು, ಪೂರ್ವಿಕರು ಕಟ್ಟಿದ ಆದರ್ಶಗಳಿಂದ ದೇವಾಲಯಗಳು ಉಳಿದಿವೆ. ಸನಾತನ ಧರ್ಮವನ್ನು ನಾಶ ಮಾಡಲು ನೂರಾರು ಹುನ್ನಾರಗಳು ನಡೆದಿವೆ. ಆದರೆ ಅದು ಸಾಧ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಹಿಂದು ಧರ್ಮವನ್ನು ನಾಶ ಮಾಡಲು ದೇವಾಲಯಗಳನ್ನು ಗುರಿಯಾಗಿಸುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಹಿಂದುಗಳು ಜಾಗೃತರಾಗಬೇಕು ಎಂದು ತಿಳಿಸಿದರು.
ನಮ್ಮ ಪರಂಪರೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಾಶ ಮಾಡುವ ಯತ್ನ ನಡೆಯುತ್ತಿದೆ. ಮಕ್ಕಳಿಗೆ ನಮ್ಮ ಪರಂಪರೆಯನ್ನು ತಿಳಿಹೇಳಲು ಪಾಲಕರು ಹಿಂಜರಿಯುತ್ತಿದ್ದಾರೆ. ಹಿಂದುಗಳು ಹಣೆಗೆ ಹಚ್ಚುವ ಕುಂಕುಮ ನಮ್ಮ ಪರಂಪರೆಯನ್ನು ಸಾರಲಿದ್ದು, ಇಂತಹದ್ದನ್ನು ಮಕ್ಕಳಿಗೆ ತಿಳಿಸಬೇಕಿದೆ. ಇದು ನಿಜವಾದ ಧರ್ಮ ಜಾಗೃತಿಯಾಗಲಿದೆ. ದೇವಾಲಯಗಳಲ್ಲಿ ಗಂಟೆ ಬಾರಿಸಲು ಕೈಗಳು ಕಾಣದೆ ಯಂತ್ರಗಳು ಬಂದಿವೆ. ಮಕ್ಕಳನ್ನು ದೇವಾಲಯಗಳಿಗೆ ಕರೆತಂದು ಭಜನೆ, ಸಂಕೀರ್ತನೆಗಳನ್ನು ಹೇಳಿಕೊಡಬೇಕಿದೆ. ಮನೆಯಲ್ಲಿ ಸಂಸ್ಕಾರ ಕಲಿಸಬೇಕಿದೆ. ಭಾರತ ಉಳಿಯಬೇಕಾದರೆ ಸನಾತನ ಧರ್ಮ ಉಳಿಯಬೇಕಿದೆ ಎಂದರು.
ಹಿಂದು ದೇವಾಲಯಗಳಿಗೆ ನಿರಂತರ ಕೊಡುಗೆ ನೀಡುತ್ತಿರುವ ಮೆಣಸುಕೊಡಿಗೆಯ ಅನ್ನಪೂರ್ಣಮ್ಮ ಶಿವರಾಮೇಗೌಡ ಅವರಿಗೆ ಹಿಂದು ಸಮಾಜ ಸೇವಾ ರತ್ನ ಪ್ರಶಸ್ತಿ, ನಿರ್ಮಾಪಕ ಮಂಜುನಾಥ್ ತುಪ್ಪೂರು ಅವರಿಗೆ ಅಯ್ಯಪ್ಪ ಕಲಾರತ್ನ ಪ್ರಶಸ್ತಿ, ನಟಿ ತ್ರಿಷಾ ಜೈನ್ ಅವರಿಗೆ ಅಯ್ಯಪ್ಪ ಅನುಗ್ರಹದ ಭವಿಷ್ಯದ ತಾರೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎ.ಆರ್.ಲತಾ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಮೋಘ್ ವಾಟುಕೊಡಿಗೆ, ಪುನೀತ್ ಕರಗಣೆ, ಪ್ರಜ್ವಲ್ ಅವರನ್ನು ಹಾಗೂ 18ನೇ ವರ್ಷದ ಶಬರಿಮಲೆ ಯಾತ್ರೆ ನಡೆಸುತ್ತಿರುವ ಮೂರ್ತಿ ರೇಣುಕನಗರ, ಸುರೇಶ್ ವಾಟುಕೊಡಿಗೆ ಅವರನ್ನು ಗೌರವಿಸಲಾಯಿತು.
ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ, ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ದಾನಿಗಳಾದ ಸತೀಶ್ ಗದ್ದೆಮನೆ, ನಾಗರಾಜ್ ದುರ್ಗಾಂಬ, ಕುಮಾರ್, ಪ್ರಭಾಕರ್ ಪ್ರಣಸ್ವಿ, ಸಹದೇವ್ ಸಾಗರ್, ಬಿ.ಜಗದೀಶ್ಚಂದ್ರ, ರವೀಂದ್ರ ಆಚಾರ್ಯ, ಅಶೋಕ್, ಸಿ.ಸ್.ಮಹೇಶ್ಚಂದ್ರ, ಶ್ರುತಿ ಸುನೀಲ್ ಪ್ರಭು, ಪಿ.ಕೆ.ಪ್ರಕಾಶ್, ಸಂದೀಪ್ ಇತರರಿದ್ದರು.