ಅಧ್ಯಾತ್ಮ ಲೋಕದಲ್ಲಿ ಅರಳಿದ ಅಮರಪುಷ್ಪ ಗುರು (Rambhapuri)

 ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
Published on
ಬಾಳೆಹೊನ್ನೂರು: ಶ್ರೀ ಗುರುವಿನ ಶಕ್ತಿ ಸಾಮರ್ಥ್ಯ ಅಗಾಧವಾದುದು. ಗುರುವಿನ ಅಂತರಂಗದಲ್ಲಿ ಆತ್ಮಾನುಭವದ ಮಕರಂದ ಸುಜ್ಞಾನ ಸೌರಭ ಕಾಣಬಹುದು. ಗುರು ಅಧ್ಯಾತ್ಮ ಲೋಕದಲ್ಲಿ ಅರಳಿದ ಅಮರಪುಷ್ಪ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 
ಭೌತಿಕ ಜೀವನದಲ್ಲಿ ತಂದೆ-ತಾಯಿ, ಒಡಹುಟ್ಟಿದವರು ಮತ್ತು ಸತಿ ಪತಿಗಳ ಪ್ರಾಪಂಚಿಕ ಸಂಬಂಧಗಳು ಒಂದೊಂದು ನಿಮಿತ್ತದಿಂದಾಗಿದೆ. ಈ ಸಂಬಂಧಗಳು ಇಲ್ಲದಿದ್ದರೆ ನಮ್ಮತ್ತ ಅವರು ತಿರುಗಿಯೂ ನೋಡುವುದಿಲ್ಲ. ಆದರೆ ಗುರು ಶಿಷ್ಯರಲ್ಲಿ ಪ್ರಾಪಂಚಿಕವಾದ ಯಾವ ಸಂಬಂಧವೂ ಇಲ್ಲ. ಸತ್ಯಾನುಭೂತಿಗಳಾಗಿ ಸಮಸ್ತ ಜಗತ್ತನ್ನೇ ಸರಿಸಿ ಬಂದವ ಶ್ರೀ ಗುರು. ಗುರು ಸಾನ್ನಿಧ್ಯದಲ್ಲಿ ಆತ್ಮಾನುಭವ ಪಡೆಯಲು ಬಂದವ ಶಿಷ್ಯ. ಪರಮ ಗುರುವಿನ ಜ್ಞಾನ ಬೋಧನೆಯಿಂದ ಶಿಷ್ಯನ ಸಂಶಯಗಳೆಲ್ಲ ದೂರವಾಗುತ್ತವೆ. ನಿಜಾನಂದ ಪ್ರಾಪ್ತವಾಗುತ್ತದೆ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಜಗತ್ತಿನ ಕಲ್ಯಾಣಕ್ಕಾಗಿ ಜನಮನ ಜಾಗೃತಿಗೊಳಿಸಲು ಬಂದವರು. ಜಾತಿ, ಮತ, ಪಂಥಗಳನ್ನು ಮೀರಿ ಜನರ ಒಳಿತಿಗಾಗಿ ಶ್ರೇಯಸ್ಸಿಗಾಗಿ ಶ್ರಮಿಸಿದ್ದನ್ನು ಮರೆಯಲಾಗದು ಎಂದು ಹೇಳಿದರು.
ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯರು, ತಡವಲಗಾ ರಾಚೋಟೇಶ್ವರ ಶಿವಾಚಾರ್ಯರು, ಹನುಮಾಪುರ ಡಾ. ಸೋಮಶೇಖರ ಶಿವಾಚಾರ್ಯರು, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಮತ್ತು ಕರ್ಜಿಗಿ ಶಂಭು ಸೋಮನಾಥ ಶಿವಾಚಾರ್ಯರು ಶ್ರೀ ಗುರುವಿನ ಮಹತ್ವದ ಕುರಿತು ಮಾತನಾಡಿದರು.
ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು. ಲೋಕಕಲ್ಯಾಣ, ವಿಶ್ವಶಾಂತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು. ಪ್ರಾತಃಕಾಲದಲ್ಲಿ ಶ್ರೀಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಹಾಗೂ ಪುಷ್ಪಾಲಂಕಾರ ನಡೆಯಿತು. 
ವೀರಶೈವ-ಲಿಂಗಾಯತ ಸಂಘಟನಾ ವೇದಿಕೆಯ ಪ್ರದೀಪ ಕಂಕನವಾಡಿ, ಚಂದ್ರಶೇಖರ್, ಬೆಂಗಳೂರಿನ ಎಸ್.ಆರ್.ವೀರಭದ್ರಯ್ಯ, ಪ್ರಭುದೇವ ಕಲ್ಮಠ, ಎಂ.ಕೊಟ್ರೇಶಪ್ಪ, ಯು.ಎಂ.ಬಸವರಾಜ, ಪ್ರಭು ಅಣ್ಣಿಗೇರಿ, ಶಿಗ್ಗಾಂವಿ ಲಿಂಗಯ್ಯ ಹಿರೇಮಠ, ಪ್ರೊ. ತೊಂಡಿಹಾಳ, ಪ್ರೊ.ಶಿವಣ್ಣನವರು ಪಾಲ್ಗೊಂಡಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net