ವಿಜೃಂಭಣೆಯ ಶ್ರೀಸ್ವರ್ಣಾಂಬ ದೇವಿ ಬ್ರಹ್ಮ ರಥೋತ್ಸವ

ಕಡೂರಿನ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿ ಬ್ರಹ್ಮರಥೋತ್ಸವ  ವಿಜೃಂಭಣೆಯಿಂದ ನಡೆಯಿತು.
ಕಡೂರಿನ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
Published on
ಕಡೂರು: ತಾಲೂಕಿನ ಮಲ್ಲೇಶ್ವರ ಗ್ರಾಮದ ಶಕ್ತಿ ದೇವತೆ ಶ್ರೀಸ್ವರ್ಣಾಂಬ ದೇವಿ ಬ್ರಹ್ಮ ರಥೋತ್ಸವ ಸಾವಿರಾರು ಜನ ಸದ್ಭಕ್ತರ ನಡುವೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಬೆಳಗ್ಗೆ ದೇವಿಯ ಮೂಲಸ್ಥಾನದಲ್ಲಿ ಅಭಿಷೇಕ, ಪೂಜೆಗಳು ನಡೆದ ನಂತರ ಶ್ರೀದೇವಿಯ ಗಜಾರೋಹಣೋತ್ಸವ, ಕನ್ನಿಕಾ ಪೂಜೆ ಹಾಗೂ ಪುರಸ್ಸರ ಕಲ್ಯಾಣೋತ್ಸವ ನಡೆಯಿತು. ಅರಳೀ ಮರದಮ್ಮ, ಚೌಡ್ಲಾಪುರ ಕರಿಯಮ್ಮ ಹಾಗೂ ಮತ್ತಿತರ ಪರಿವಾರ ದೇವತೆಗಳ ಉಪಸ್ಥಿತಿಯಲ್ಲಿ ಸ್ವರ್ಣಾಂಬ ದೇವಿ ಉತ್ಸವ ವಿಗ್ರಹವನ್ನು ನೆರೆದಿದ್ದ ಜನರೆದುದು ಮೂರು ಸುತ್ತು ತರಲಾಯಿತು. ಮುತ್ತೈದೆಯರು ಶ್ರೀದೇವಿಗೆ ಅರಿಶಿನ ಕುಂಕುಮ ಸಮರ್ಪಿಸಿದ ನಂತರ ಶ್ರೀಮಾತೆಯ ಉತ್ಸವ ವಿಗ್ರಹವನ್ನು ಆಲಂಕೃತ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಲಿ ಪ್ರಧಾನ ನಂತರ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು.
ಪುರೋಹಿತ ದೇವಿ ಪ್ರಸಾದ್ ಶರ್ಮ ಮತ್ತು ತಂಡದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಸುಡುಬಿಸಿಲಿನ ನಡುವೆಯೂ ಸಾವಿರಾರು ಜನ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ವಾಹನ ದಟ್ಟಣೆ ಹೆಚ್ಚಿದ್ದರಿಂದ ದೇವಸ್ಥಾನದಿಂದ ದೂರದಲ್ಲಿಯೇ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು.
ಏಳುದಿನದ ಜಾತ್ರಾ ಮಹೋತ್ಸವದಲ್ಲಿ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ, ವುವಿಧ ಹೋಮಗಳು, ದೀಪಾರಾಧನೋತ್ಸವ, ಉಯ್ಯಲೋತ್ಸವ, ತೆಪೋತ್ಸವಗಳು ನಡೆದವು. ಸ್ವರ್ಣಾಂಬ ಕಲ್ಯಾಣ ಮಂಟಪದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ ಎಂದು ದೇವಸ್ಥಾನ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ತಿಳಿಸಿದರು.
ರಥೋತ್ಸವಕ್ಕೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಭಕ್ತರು ಅಗಮಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಡೂರು ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ದೇವಸ್ಥಾನದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಸಂಜೆ ದೀಪಾರಾಧನೋತ್ಸವ ನಡೆಯಿತು. ನಂತರ ದೇವಸ್ಥಾನದ ಧರ್ಮಾಧಿಕಾರಿಯಾಗಿದ್ದ ದಿ.ಎಂ.ಟಿ.ಶ್ರೀನಿವಾಸ್ ಅವರ ಸಂಸ್ಮರಣಾ ಕಾರ್ಯಕ್ರಮ ಹಾಗೂ ಎಂ.ಟಿ.ಶ್ರೀನಿವಾಸ್ ಅವರ ಕುರಿತಾದ ಇ- ಪುಸ್ತಕ ಮಿತ್ರವತ್ಸಲ ಬಿಡುಗಡೆಗೊಳಿಸಲಾಯಿತು. ಎಂ.ಆರ್.ಧರ್ಮಣ್ಣ, ಎಂ.ವೈ.ಚಂದ್ರಶೇಖರ, ಹಿರಿಯ ಕಲಾವಿದ ಕಲ್ಲೇಶಪ್ಪ, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಡಾ.ಎಂ.ಟಿ.ಸತ್ಯನಾರಾಯಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net