ಗುಂಡಿಮಯವಾದ ಮುಂಡೊಳ್ಳಿ ರಸ್ತೆ

ಎನ್.ಆರ್.ಪುರ ಬಸ್ತಿಮಠ ಮುಖ್ಯ ರಸ್ತೆಯಿಂದ ಮುಂಡೊಳ್ಳಿ, ನಾಗಲಾಪುರ, ಕಾರೆಕೊಪ್ಪ, ಸೀಗುವಾನಿ ಸರ್ಕಲ್ ರಸ್ತೆ ಗುಂಡಿಮಯವಾಗಿರುವುದು.
ಎನ್.ಆರ್.ಪುರ ಬಸ್ತಿಮಠ ಮುಖ್ಯ ರಸ್ತೆಯಿಂದ ಮುಂಡೊಳ್ಳಿ, ನಾಗಲಾಪುರ, ಕಾರೆಕೊಪ್ಪ, ಸೀಗುವಾನಿ ಸರ್ಕಲ್ ರಸ್ತೆ ಗುಂಡಿಮಯವಾಗಿರುವುದು.
Published on
ಎನ್.ಆರ್.ಪುರ: ಪಟ್ಟಣದ ಬಸ್ತಿಮಠ ಮುಖ್ಯರಸ್ತೆಯಿಂದ ಮುಂಡೊಳ್ಳಿ, ನಾಗಲಾಪುರ, ಕಾರೆಕೊಪ್ಪ, ಸೀಗುವಾನಿ ಸರ್ಕಲ್‌ವರೆಗೆ ಎರಡು ಕಿ.ಮೀ. ಬೈಪಾಸ್ ರಸ್ತೆ ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರ ದುಸ್ತರವಾಗಿದ್ದು, ತಕ್ಷಣ ರಸ್ತೆ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಸ್ತಿಮಠ ಮುಖ್ಯರಸ್ತೆಯಿಂದ ಬೈಪಾಸ್ ರಸ್ತೆ ಮುಂಡೊಳ್ಳಿ, ನಾಗಲಾಪುರ, ಕಾರೆಕೊಪ್ಪದ ಮೂಲಕ ಸೀಗುವಾನಿ ಸರ್ಕಲ್ ಸೇರುತ್ತದೆ. ಅಲ್ಲಿಂದ ವರ್ಕಾಟೆ, ಹಂತುವಾನಿ, ಹೊನ್ನೇಕೊಡಿಗೆ ಮುಂತಾದ ಊರುಗಳಿಗೆ ಹೋಗುವ ರಸ್ತೆಗೂ ಸಂಪರ್ಕಿಸುತ್ತದೆ. ವಿಶೇಷವೆಂದರೆ ಈ ಬೈಪಾಸ್ ರಸ್ತೆಯಲ್ಲಿ 30 ಎಕರೆ ವಿಸ್ತೀರ್ಣದ ಹೆಗ್ಗೇರಿ ಕೆರೆ ಇದೆ. ರಸ್ತೆಯ ಉದ್ದಕ್ಕೂ ದೊಡ್ಡ ಹೊಂಡಗಳು ನಿರ್ಮಾವಾಗಿವೆ. ವಾಹನ ಸವಾರರು ಹೊಂಡ ತಪ್ಪಿಸಿ ಹೋಗಲು ಸಾಧ್ಯವಾಗುತ್ತಿಲ್ಲ. ವರ್ಕಾಟೆ, ಹಂತುವಾನಿ, ಸೀಗುವಾನಿ, ಮುಂತಾದ ಗ್ರಾಮಗಳ ಜನರೂ ಇದೇ ರಸ್ತೆಯನ್ನು ಅವಲಂಬಿಸಿದ್ದರೆ.
ಬೈಪಾಸ್ ರಸ್ತೆಗೆ ಕಳೆದ ಐದಾರು ವರ್ಷದ ಹಿಂದೆ ಟಾರ್ ಹಾಕಲಾಗಿತ್ತು. ಆದರೆ ಈಗ ಟಾರು ಕಿತ್ತು ದೊಡ್ಡ, ದೊಡ್ಡ ಹೊಂಡಗಳಾಗಿವೆ. ಈ ಗುಂಡಿಗಳಿಂದ ಅಪಘಾತ ಸಂಭವಿಸುತ್ತವೆ. ಮಳೆಗಾಲದಲ್ಲಿ ಈ ಹೊಂಡಗಳಲ್ಲಿ ನೀರು ನಿಂತು ಹೊಂಡ ಕಾಣದೆ ವಾಹನಗಳು ಗುಂಡಿಗೆ ಬೀಳುತ್ತಿದೆ. ಹೆಗ್ಗೇರಿ ಕೆರೆ ತಂಬಿದ್ದು ಈ ರಸ್ತೆಯಲ್ಲಿ ಹೊಂಡಗಳನ್ನು ತಪ್ಪಿಸಲು ಹೋದರೆ ವಾಹನಗಳು ಪಲ್ಟಿಯಾಗಿ ಕೆರೆಗೆ ಅಥವಾ ತೋಟಕ್ಕೆ ಬೀಳುವ ಸಂಭವ ಹೆಚ್ಚಿದೆ. ಆದ್ದರಿಂದ ಕೆರೆ ದಂಡೆಯ ಮೇಲೆ ಬರುವ ರಸ್ತೆ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸಬೇಕು. ತುರ್ತಾಗಿ ಹೊಂಡ ಮುಚ್ಚುವ ಮೂಲಕ ರಸ್ತೆ ಸಂಚಾರ ಸುಗಮಗೊಳಿಸಿ ಅಪಾಯ ತಪ್ಪಿಸಬೇಕು ಎಂದು ಗ್ರಾಮಸ್ಥರಾದ ಕೆ.ಎನ್.ಶಿವದಾಸ್, ಸೀಗುವಾನಿ ಉಪೇಂದ್ರಗೌಡ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net