ಬಾಳೆಹೊನ್ನೂರು ಸಮೀಪದ ಹೇರೂರು ಗ್ರಾಪಂ ವ್ಯಾಪ್ತಿಗೆ ಮಲೆನಾಡಿನ ಕಂದಾಯ-ಅರಣ್ಯ ಭೂಮಿ ಸರ್ವೇ ಕಾರ್ಯದ ಕುರಿತು ಟಾಸ್ಕ್‌ಪೋರ್ಸ್ ಸಮಿತಿ ಭೇಟಿ ನೀಡಿ ಶಾಸಕ ಟಿ.ಡಿ.ರಾಜೇಗೌಡಗೆ ಮಾಹಿತಿ ನೀಡಿತು.
ಬಾಳೆಹೊನ್ನೂರು: ಮಲೆನಾಡಿನ ಅರಣ್ಯ-ಕಂದಾಯ ಭೂಮಿ ಸಮಸ್ಯೆ ಕುರಿತು ಜಂಟಿ ಸರ್ವೇಗೆ ರಾಜ್ಯ ಸರ್ಕಾರದಿಂದ ಈಗಾಗಲೇ ಟಾಸ್ಕ್‌ಪೋರ್ಸ್ ಸಮಿತಿ ರಚಿಸಿದ್ದು, ಈ ತಂಡ ಜಿಲ್ಲೆಗೆ ಆಗಮಿಸಿ ಜಂಟಿ ಸರ್ವೇ ಕುರಿತು ಮಾಹಿತಿ ಕಲೆ ಹಾಕುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಹಲವು ವರ್ಷಗಳ ಬೇಡಿಕೆಯಂತೆ ರಾಜ್ಯ ಸರ್ಕಾರ ಜಂಟಿ ಸರ್ವೇ ಕುರಿತು ಟಾಸ್ಕ್‌ಪೋರ್ಸ್ ಸಮಿತಿ ರಚನೆ ಮಾಡಿ ಆದೇಶ ಮಾಡಿದ್ದು, ರಾಜ್ಯಮಟ್ಟದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳನ್ನು ಒಳಗೊಂಡ ಒಂದು ಸಮಿತಿ, ಇನ್ನೊಂದು ಸಂಪೂರ್ಣ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಜಂಟಿ ಸರ್ವೇ ಟಾಸ್ಕ್‌ಪೋರ್ಸ್ ಸಮಿತಿ ಈ ಹಿಂದೆ 2016-17ರಲ್ಲಿ ರದ್ದಾಗಿದ್ದು, ನಾವು ಸತತ ಹೋರಾಟ ಮಾಡಿ ಈ ಸಮಿತಿ ಮತ್ತೆ ರಚನೆಯಾಗುವಂತೆ ಮಾಡಲಾಗಿದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ 1.42 ಲಕ್ಷ ಹೆಕ್ಟೇರ್ ಭೂಮಿ ಅರಣ್ಯ ಎಂದಾಗಿದ್ದು, ಇದರಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ನಮ್ಮ ಹೋರಾಟದಿಂದ ಜಿಲ್ಲಾಧಿಕಾರಿ ಆದೇಶದಿಂದ ಅರಣ್ಯದಿಂದ ಹೊರಕ್ಕೆ ಬಿಡುಗಡೆಯಾಗಿದೆ ಎಂದರು.
ಕ್ಷೇತ್ರದಲ್ಲಿ ಸುಮಾರು 120 ಹಳ್ಳಿಗಳಲ್ಲಿ ಜಂಟಿ ಸರ್ವೇ ಆಗಿದೆ. ಕ್ಷೇತ್ರದಲ್ಲಿ ಜಂಟಿ ಸರ್ವೇಗೆ ಕೆಲವರು ತಡೆ ಮಾಡುತ್ತಿದ್ದಾರೆ. ಈಗಾಗಲೇ ಸೆಕ್ಷನ್ 17 ಆಗಿರುವಂತಹ ಜಾಗವನ್ನು ಗುರುತಿಸುವುದು, ಒತ್ತುವರಿ ಆಗಿರುವ ಜಾಗ ಗುರುತು ಮಾಡುವುದು, ಒತ್ತುವರಿ ಆಗಿ ನಮೂನೆ 50, 53, 57, 94ಸಿ, 94ಸಿಸಿ ಅಡಿಯಲ್ಲಿ ಅರ್ಜಿ ಹಾಕಿರುವ ಜಾಗಗಳನ್ನು ಹೊರತುಪಡಿಸಿ ಸರ್ವೇ ಮಾಡಲಾಗುತ್ತಿದೆ. ಸೆಕ್ಷನ್ 17 ಆಗಿರುವ ಪ್ರದೇಶವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. 4/1 ನೋಟಿಫಿಕೇಶನ್ ಆಗಿರುವ ಜಮೀನನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದು ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕಿದೆ ಎಂದರು.
ಅರಣ್ಯ ಇಲಾಖೆ ಸಿಸಿಎಫ್ ಯಶ್‌ಪಾಲ್ ಕ್ಷೀರಸಾಗರ್, ಡಿಎಫ್‌ಓ ಶಿವಶಂಕರ್, ಆರ್‌ಎಫ್‌ಓ ರಂಗನಾಥ್, ಮೋಹನ್ ಕುಮಾರ್, ಪ್ರವೀಣ್, ಮುಖಂಡರಾದ ಕುಕ್ಕುಡಿಗೆ ರವೀಂದ್ರ, ಎಚ್.ಸಿ.ಅಶ್ವಥ್, ಸುಕುಮಾರ್ ಕುಕ್ಕುಡಿಗೆ, ಬಿ.ಸಿ.ಮಂಜುನಾಥ್ ಮತ್ತಿತರರು ಇದ್ದರು.