

ಚಿಕ್ಕಮಗಳೂರು: ಅಜ್ಜಂಪುರ ಸಮೀಪದ ಅಮೃತ ಮಹಲ್ ಕಾವಲ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಅವರು ಅಮೃತ್ ಮಹಲ್ ಗೆ ಸೇರಿದ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇವು ಬೆಳೆಸಲು ಕ್ರಮ ಕೈಗೊಳ್ಳಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಮೃತ್ ಮಹಲ್ ನಲ್ಲಿ 700 ಎಕರೆಗೂ ಹೆಚ್ಚು ಪ್ರದೇಶವಿದೆ. ಆದರೆ ಕೆಲವೇ ಕೆಲವು ಎಕರೆಯಲ್ಲಿ ಮಾತ್ರ ಮೇವು ಬೆಳೆಯಲಾಗುತ್ತಿದೆ. ಈ ಬಾರಿ ಜಿಲ್ಲೆಯ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆಯಾಗದಂತೆ ತಡೆಯಲಯ ಅಮೃತ ಮಹಲ್ ಜಾಗದಲ್ಲಿ ಹೆಚ್ಚಿನ ಮೇವು ಬೆಳೆಯಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮೃತ್ ಮಹಲ್ ಕಾವಲ್ ನ ಉಪ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್, ನಮ್ಮಲ್ಲಿ ಜಾಗವೇನು ಇದೆ. ಆದರೆ ನೀರಿನ ಸಮಸ್ಯೆ ಇದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮೇವು ಬೆಳೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ವಿದ್ಯುತ್ ಸಮಸ್ಯೆಯಿಂದಲೂ ನೀರಿಗೆ ಸಮಸ್ಯೆಯಾಗುತ್ತಿದೆ ಎಂದು ವಿವರಿಸಿದರು.
ಸಮಸ್ಯೆ ಮನಗಂಡ ಸಚಿವರು ಕೂಡಲೇ ಕುಸುಮ್ ಬಿ ಯೋಜನೆಯಡಿ ಅಮೃತ್ ಮಹಲ್ ಪ್ರದೇಶದಲ್ಲಿರುವ ಕೊಳವೆ ಬಾವಿಗಳಿಗೆ ಸೋಲಾರ್ ಪ್ಯಾನಲ್ ಅಳವಡಿಕೆ ಮಾಡಿ ವಿದ್ಯುತ್ ಸಂಪರ್ಕ ಪಡೆಯುವಂತೆ ಸೂಚನೆ ನೀಡಿದರು. ಅಲ್ಲದೆ ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿ ಅವುಗಳಿಗೂ ಕುಸುಮ್ ಯೋಜನೆಯಡಿ ಮೋಟರ್ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಅಮೃತ್ ಮಹಲ್ ಕಾವಲ್ನ ಪ್ರದೇಶದಲ್ಲಿ ಜಾಲಿ ಗಿಡಗಳು ದೊಡ್ಡ ದೊಡ್ಡದಾಗಿ ಬೆಳೆದಿವೆ. ಇವುಗಳನ್ನು ಕಾರ್ಮಿಕರನ್ನು ಬಳಸಿಕೊಂಡು ತೆರವು ಮಾಡಲು ಸಾಧ್ಯವಿಲ್ಲ. ಹೀಗಾಗಿ ಯಂತ್ರಗಳನ್ನೇ ಬಳಸಿಕೊಳ್ಳಬೇಕಿದೆ. ಕಾರ್ಮಿಕರನ್ನು ಬಳಸಿಕೊಂಡು ಜಾಗ ಸ್ವಚ್ಛ ಮಾಡುವುದಾಗಿದ್ದರೆ ವಿಬಿ ರಾಮ್ ಜಿ ಯೋಜನೆಯಲ್ಲಿ ಕೆಲಸ ಕೈಗೆತ್ತಿಕೊಳ್ಳಬಹುದಿತ್ತು. ಹೀಗಾಗಿ ಹೊಸ ಕ್ರಿಯಾ ಯೋಜನೆ ತಯಾರಿಸಬೇಕಿದೆ ಎಂದು ಹೇಳಿದರು.
ಪಂಪ್ ಹೌಸ್ ಗೆ ಭೇಟಿ
ತರೀಕೆರೆಗೆ ಆಗಮಿಸಿದ ಸಚಿವ ಕೆಜೆ ಜಾರ್ಜ್ ಅವರು ನೇರವಾಗಿ ದೋರನಾಳು ಗ್ರಾಮದ ಹೊರವಲಯದಲ್ಲಿರುವ ಭದ್ರ ಮೇಲ್ದಂಡೆ ಯೋಜನೆಯಿಂದ ನೀರೆತ್ತಿ ತರೀಕೆರೆ, ಕಡೂರು, ಚಿಕ್ಕಮಗಳೂರು, ಅರಸೀಕೆರೆ ತಾಲೂಕಿನ ಕೆರೆಗಳಿಗೆ ನೀರೊದಗಿಸುವ ಪಂಪ ಹೌಸ್ ಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಮೊದಲು ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕಿದೆ. ಹೀಗಾಗಿ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವಂತೆ ನೀರಾವರಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದೇವೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ನೀರು ಹರಿಸುವ ಸಾಧ್ಯತೆ ಇದೆ. ನಾಳೆಯಲ್ಲಿ ನೀರು ಬಂದಾಕ್ಷಣ ಪಂಪ್ ಹೌಸ್ ನಿಂದ ನೀರೆತ್ತಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುವುದು ಎಂದು ಮಾಹಿತಿ ನೀಡಿದರು.