ಮಳೆ ಹಾನಿ ವರದಿ ತುರ್ತಾಗಿ ಸಲ್ಲಿಸಿ

ಶೃಂಗೇರಿ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಬೆಟ್ಟಗೆರೆ-ಕೆರೆಮನೆ ರಸ್ತೆಯನ್ನು ಡಿಸಿ ಭನ್ವರ್ ಸಿಂಗ್ ಮೀನಾ ಪರಿಶೀಲಿಸಿದರು. ಅನೂಪ್ ಸಂಜೋಗ್, ಸುದೀಪ್, ಭುವನೇಂದ್ರ ಇದ್ದರು.
ಶೃಂಗೇರಿ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಬೆಟ್ಟಗೆರೆ-ಕೆರೆಮನೆ ರಸ್ತೆಯನ್ನು ಡಿಸಿ ಭನ್ವರ್ ಸಿಂಗ್ ಮೀನಾ ಪರಿಶೀಲಿಸಿದರು. ಅನೂಪ್ ಸಂಜೋಗ್, ಸುದೀಪ್, ಭುವನೇಂದ್ರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ
  • ಡಿಸಿ ಭನ್ವರ್ ಸಿಂಗ್ ಮೀನಾ ಸೂಚನೆ
ಶೃಂಗೇರಿ: ಮಳೆಯಿಂದ ಹಾನಿಗೊಳಗಾದ ಬೆಳೆಗಳ ಸಂಪೂರ್ಣ ವರದಿಯನ್ನು ಕೃಷಿ ಮತ್ತು ತೋಟಗಾರಿಕಾ ಇಲಾಖೆ ತುರ್ತಾಗಿ ನೀಡಬೇಕು. ಹವಾಮಾನ ಆಧಾರಿತ ಸಲ್ ಬಿಮಾ ಯೋಜನೆಯಲ್ಲಿ ನೋಂದಣಿ ಕಡಿಮೆಯಾಗಿದ್ದು, ಪ್ರತಿ ಗ್ರಾಪಂ ಮಟ್ಟದಲ್ಲಿ ಎರಡು ದಿನದ ಒಳಗೆ ಪ್ರಚಾರಪಡಿಸಿ ಎಲ್ಲ ರೈತರನ್ನು ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆ, ಕೃಷಿ ಭೂಮಿ, ತಡೆಗೋಡೆಗಳನ್ನು ಡಿಸಿ ಪರಿಶೀಲಿಸಿ ಬುಧವಾರ ತಾಲೂಕು ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದರು.
ಅಡಿಕೆ, ಕಾಫಿ, ಕಾಳುಮೆಣಸು ಮತ್ತು ಸಾಂಬಾರು ಪದಾರ್ಥಗಳ ಗಿಡಗಳನ್ನು ನರ್ಸರಿಯಲ್ಲಿ ಬೆಳೆಸಿ ರೈತರಿಗೆ ವಿತರಿಸಬೇಕು. ತಾಲೂಕಿನಲ್ಲಿ ನರ್ಸರಿ ಮಾಡಲು ಜಾಗದ ಕೊರತೆ ಇದ್ದರೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ, ಜಾಗ ನೀಡಲಾಗುವುದು. 1800 ಹೆಕ್ಟೇರ್ ಪ್ರದೇಶ ಭತ್ತದ ಕೃಷಿಗೆ ಲಭ್ಯವಿದ್ದು, ಕೇವಲ 1000 ಹೆಕ್ಟೇರ್ ಬಿತ್ತನೆಯಾಗಿದೆ. ಕೂಡಲೇ ಉಳಿದ ಜಾಗದಲ್ಲಿ ಬಿತ್ತನೆ ಮಾಡಿಸುವತ್ತ ಅಧಿಕಾರಿಗಳು ಹೆಚ್ಚು ಗಮನ ನೀಡಬೇಕು ಎಂದು ನಿರ್ದೇಶನ ನೀಡಿದರು. 
ಹಲವು ಭತ್ತದ ಗದ್ದೆಗಳು ಮಳೆಯಿಂದ ಹಾನಿಯಾಗಿದ್ದು, ವಿಮಾ ಯೋಜನೆ ಮಾಹಿತಿ ರೈತರಿಗೆ ನೀಡಿ, ನೋಂದಣಿ ಮಾಡಿ, ಪರಿಹಾರ ನೀಡಬೇಕು. ಪ್ರಸ್ತುತ ಕಾಮಗಾರಿ ನಡೆಯುತ್ತಿರುವ 100 ಹಾಸಿಗೆ ಆಸ್ಪತ್ರೆಯು ಪಟ್ಟಣದಿಂದ 2 ಕಿ.ಮೀ ದೂರ ಇರುವುದರಿಂದ ಶೀಘ್ರದಲ್ಲಿ ಕಾಮಗಾರಿ ಮುಗಿಸಿ, ಪಟ್ಟಣದ ಮಧ್ಯವಿರುವ ಹಳೆಯ ಆಸ್ಪತ್ರೆ ಕಟ್ಟಡದಲ್ಲಿ ಕ್ಲಿನಿಕ್ ಪ್ರಾರಂಭಿಸಬೇಕು. ತಾಲೂಕಿನಲ್ಲಿ 105 ಅಂಗನವಾಡಿಗಳಿದ್ದು, ಪಟ್ಟಣದಲ್ಲಿ 4 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಆದ್ದರಿಂದ ಪಪಂ ಕೂಡಲೇ ಜಾಗ ಗುರುತಿಸಿ ನೀಡಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು. 
ಮಕ್ಕಳು ಹೆಚ್ಚು ಜಂಕ್‌ಫುಡ್ ಸೇವನೆಯಿಂದ ವಿಟಮಿನ್ ಕೊರತೆ ಆಗುತ್ತಿದೆ. ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವಾದ 50 ಗ್ರಾಂ ಮೊಟ್ಟೆ ಮತ್ತು ಸೊಪ್ಪಿನ ಪದಾರ್ಥವನ್ನು ಹೆಚ್ಚು ನೀಡಬೇಕು. ಪಟ್ಟಣದ ಭಾರತೀ ಬೀದಿ ಮತ್ತು ಹರಿಹರ ಬೀದಿ ಹೊಂಡಗುಂಡಿಗಳಿಂದ ಆವೃತ್ತವಾಗಿದ್ದು ಶೀಘ್ರ ಮುಚ್ಚಿಸಬೇಕು. ಶೃಂಗೇರಿ ಪ್ರಮುಖ ಯಾತ್ರಾ ಸ್ಥಳವಾದ್ದರಿಂದ ಸುತ್ತಮುತ್ತವಿರುವ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು. ಯಾವುದೇ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ. ಕೆಲಸ ಮಾಡಲು ಅಧಿಕಾರಿಗಳಿಗೆ ಇಚ್ಛಾಶಕ್ತಿ ಇರಬೇಕು. ಮುಖ್ಯಮಂತ್ರಿ ಆದೇಶದ ಪ್ರಕಾರ ಜಿಲ್ಲೆ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗಲು ಎಲ್ಲ್ಲ ಅಧಿಕಾರಿಗಳ ನಿರಂತರ ಶ್ರಮ ಅಗತ್ಯ ಎಂದು ತಿಳಿಸಿದರು.
ಮಳೆಯಿಂದ ಹಾನಿಯಾದ ತಾಲೂಕು ಕಚೇರಿ ಎದುರು ದರ್ಗಾಕ್ಕೆ ಕಟ್ಟಿರುವ ತಡೆಗೋಡೆ ಹಾನಿ, ಬೆಟ್ಟಗೆರೆ-ಕೆರೆಮನೆ ರಸ್ತೆ, ವೈಕುಂಠಪುರದ ಗುಂಡ್ರೆ ರಸ್ತೆ, ನಲ್ಲೂರು ಶ್ರೀ ಚಂದ್ರಶೇಖರ್ ಆಚಾರ್ಯ ಅವರ ಭತ್ತದ ಗದ್ದೆ, ಕಿಗ್ಗಾ ದೇವಸ್ಥಾನ, ಸಿರಿಮನೆ ಜಲಪಾತಗಳಿಗೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಭೇಟಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ 169ರ ತನಿಕೋಡಿನಿಂದ ಮಾಳ ಗೇಟ್‌ವರೆಗೆ ಮಳೆಗಾಲದಲ್ಲಿ ಲಾರಿಗಳ ಸಂಚಾರ ನಿಷೇಧಿಸಿ ಆದೇಶಿಸಿ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ನೀಡುತ್ತಾರೆ. ನಿಷೇಧಿಸಿದರೆ ಸಾರ್ವಜನಿಕರಿಗೆ ರಸ್ತೆ, ಕಟ್ಟಡ ನಿರ್ಮಾಣ ಮಾಡಲು ಜಲ್ಲಿ ಮತ್ತು ಎಂ.ಸ್ಯಾಂಡ್ ಪೂರೈಸಲು ತೊಂದರೆಯಾಗುತ್ತದೆ. ಕಳೆದ ಮಾರ್ಚ್‌ನಲ್ಲಿ ಬಿಡುಗಡೆಯಾದ 14 ಕೋಟಿ ರೂ. ಅನುದಾನಕ್ಕೆ ಕೂಡಲೇ ಟೆಂಡರ್ ಕರೆದು ಹೆದ್ದಾರಿಯಲ್ಲಿರುವ ಎರಡು ಸೇತುವೆಯ ಕಾಮಗಾರಿ ಪೂರ್ಣಗೊಳಿಸಿ ಎಂದು ಇಂಜಿನಿಯರ್‌ಗೆ ಸೂಚಿಸಿದರು. ತಾಲೂಕಿನ 34 ಗ್ರಾಮಗಳಲ್ಲಿ ಜಂಟೀ ಸರ್ವೇ ಪೂರ್ಣಗೊಂಡಿದ್ದು, ಉಳಿದ 15 ಗ್ರಾಮಗಳಲ್ಲಿ ಸೆ.15ರ ಒಳಗೆ ಪೂರ್ಣಗೊಳಿಸಿ. ಅಧಿಕಾರಿಗಳ ಕೊರತೆ ಇರುವುದರಿಂದ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡು ಕೂಡಲೇ ಆದೇಶ ನೀಡುತ್ತೇನೆ ಎಂದು ವಲಯ ಅರಣ್ಯಾಧಿಕಾರಿ ಮಧುಕರ್ ಅವರಿಗೆ ಡಿಸಿ ಭನ್ವರ್ ಸಿಂಗ್ ಮೀನಾ ತಿಳಿಸಿದರು. 
ತಹಸೀಲ್ದಾರ್ ಅನೂಪ್ ಸಂಜೋಗ್, ತಾಪಂ ಇಒ ಎಚ್.ಸುದೀಪ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net