ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಣೆ
ಚಿಕ್ಕಮಗಳೂರು ಎಂಇಎಸ್ ಕಾಲೇಜಿನಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದಕ್ಕೆ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು ಕಾಲೇಜಿನಿಂದ ಹೊರಕಳಿಸಿದ ಹಿನ್ನೆಲೆಯಲ್ಲಿ ಕಾಲೇಜಿಗೆ ಆಗಮಿಸಿದ ಹಿಂದುಪರ ಸಂಘಟನೆಗಳ ಮುಖಂಡರು ಕಾಲೇಜು ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡರು.
Published on:
Copied
Follow Us
ಚಿಕ್ಕಮಗಳೂರು: ಅಯ್ಯಪ್ಪ Ayyappa ಮಾಲೆ ಧರಿಸಿದ್ದಕ್ಕೆ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು ಕಾಲೇಜಿನಿಂದ ಹೊರಕಳಿಸಿದ ಘಟನೆ ಚಿಕ್ಕಮಗಳೂರಿನ ಎಂಇಎಸ್ ಕಾಲೇಜಿನಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಕಾಲೇಜಿಗೆ ಆಗಮಿಸಿದ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊದಲ ವರ್ಷದ ಪಿಯು ತರಗತಿಯ ಮೂವರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ಕಾಲೇಜಿಗೆ ಬಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾಚಾರ್ಯರು ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕೂರಲು ಅವಕಾಶ ನೀಡದೆ ಹೊರಗೆ ಕಳಿಸಿದ್ದಾರೆ. ಅಲ್ಲದೆ ಅಯ್ಯಪ್ಪ ಮಾಲೆ ತೆಗೆದು ತರಗತಿಗೆ ಬರುವಂತೆ ಸೂಚನೆ ನೀಡಿದ್ದಾರೆ.
ಹಿಂದುಪರ ಸಂಘಟನೆಗಳಿಗೆ ಪ್ರತಿಕ್ರಿಯಿಸಿದ ಪ್ರಾಚಾರ್ಯರು, ಕಾಲೇಜಿನಲ್ಲಿ ಯೂನಿಫಾರ್ಮ್ ಬಿಟ್ಟರೆ ಬೇರೆ ಯಾವುದೇ ವಸ್ತ್ರ ್ರಸಂಹಿತೆಗೆ ಅವಕಾಶವಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಅದಕ್ಕೆ ಆಕ್ರೋಶಗೊಂಡ ಹಿಂದುಪರ ಸಂಘಟನೆಗಳ ಮುಖಂಡರು ಬುರ್ಖಾ ಧರಿಸಿ ಬಂದರೆ ಅವರನ್ನು ಕಾಲೇಜಿನಿಂದ ಹೊರಗೆ ಕಳಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಹುಡುಗರು ಕಾಲೇಜಿನ ಸಮವಸ್ತ್ರದಲ್ಲಿಯೇ ಬಂದಿದ್ದಾರೆ. ಜತೆಗೆ ಮೇಲೆ ಒಂದು ಕಪ್ಪುವಸ್ತ್ರ ಧರಿಸಿದ್ದಾರೆ ಅಷ್ಟೇ. ಇದು ನಿಮ್ಮ ವಸ್ತ್ರಸಂಹಿತೆ ಉಲ್ಲಂಘನೆ ಹೇಗಾಗುತ್ತದೆ. ಉದ್ದೇಶಪೂರ್ವಕವಾಗಿ ನೀವು ಹಿಂದುಗಳನ್ನು ಗುರಿಯಾಗಿರಿಸಿಕೊಂಡು ಈ ರೀತಿ ಕ್ರಮ ಕೈಗೊಳ್ಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಹಿಂದುಪರ ಸಂಘಟನೆಗಳ ಮುಖಂಡರಾದ ಸಂತೋಷ್ ಕೋಟ್ಯಾನ್, ಶ್ಯಾಮ್ ವಿ.ಗೌಡ, ಜೀವನ್ ಕೋಟೆ ಮತ್ತಿತರರಿದ್ದರು.