ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸು ಹೊಂದಿರಬೇಕು

ಚಿಕ್ಕಮಗಳೂರು ಸಂತ ಜೋಸೆಫರ ಫ್ರೌಢಶಾಲೆಯಲ್ಲಿ ಐಸಿರಿ ಫೌಂಡೇಶನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಎಚ್ ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್)  ಲಸಿಕೆ ಕುರಿತು ಅರಿವು ಮತ್ತು ಲಸಿಕೆ ವಿತರಣಾ ಕಾರ್ಯಕ್ರಮವನ್ನು ಐಸಿರಿ ಫೌಂಡೇಷನ್‌ ಅಧ್ಯಕ್ಷ ರೋಹನ್‌ ಭಾರ್ಗವಪುರಿ ಉದ್ಘಾಟಿಸಿದರು.
ಚಿಕ್ಕಮಗಳೂರು ಸಂತ ಜೋಸೆಫರ ಫ್ರೌಢಶಾಲೆಯಲ್ಲಿ ಐಸಿರಿ ಫೌಂಡೇಶನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಎಚ್ ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆ ಕುರಿತು ಅರಿವು ಮತ್ತು ಲಸಿಕೆ ವಿತರಣಾ ಕಾರ್ಯಕ್ರಮವನ್ನು ಐಸಿರಿ ಫೌಂಡೇಷನ್‌ ಅಧ್ಯಕ್ಷ ರೋಹನ್‌ ಭಾರ್ಗವಪುರಿ ಉದ್ಘಾಟಿಸಿದರು.
Published on
ಚಿಕ್ಕಮಗಳೂರು: ಜೀವನದಲ್ಲಿ ವಿದ್ಯಾರ್ಥಿಗಳು ದೊಡ್ಡ ಕನಸು ಹೊಂದಿರಬೇಕು. ಆ ಕನಸು ಸಕಾರಗೊಳಿಸಲು ಒಳ್ಳೆಯ ಆರೋಗ್ಯ ಇರಬೇಕು. ಆರೋಗ್ಯವನ್ನು ಸುಧಾರಿಸಲು ಎಚ್ ಪಿವಿ ಲಸಿಕೆ ಹಾಕಿಸಬೇಕು. ಒಳ್ಳೆಯ ಊಟ ಪೂರಕವಾಗಿ ತೆಗೆದುಕೊಳ್ಳಬೇಕು ಎಂದು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ತಿಳಿಸಿದರು.
ನಗರದ ಸಂತ ಜೋಸೆಫರ ಫ್ರೌಢಶಾಲೆಯಲ್ಲಿ ಐಸಿರಿ ಫೌಂಡೇಶನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಎಚ್ ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆ ಕುರಿತು ಅರಿವು ಮತ್ತು ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತುಂಬಾ ಚನ್ನಾಗಿ ನಿಮ್ಮ ಜೀವನವನ್ನು ನೀವು ರೂಪಿಸಿಕೊಳ್ಳಬೇಕು. ಚನ್ನಾಗಿ ಓದಬೇಕಾದರೆ ಅದಕ್ಕೆ ಆರೋಗ್ಯ ನಿಮ್ಮನ್ನು ಸ್ಪಂದಿಸಬೇಕು. ಆರೋಗ್ಯವೇ ಭಾಗ್ಯ. ಉತ್ತಮ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಪರಿಸರ ಮಾಲಿನ್ಯ, ನೀರು ಮಾಲಿನ್ಯ, ಆಹಾರದಲ್ಲಿ ಪ್ಲಾಸ್ಟಿಕ್ ಅಂಶವುಳ್ಳ ಪದಾರ್ಥಗಳ ಬಳಕೆ, ಮೈಕ್ರೋ ಪ್ಲಾಸ್ಟಿಕ್‌ನಿಂದ ಕ್ಯಾನ್ಸರ್ ಬರುತ್ತಿದೆ. ಎಚ್.ಪಿ.ವಿ. ಲಸಿಕೆಗೆ ೧೦-೧೨ ಸಾವಿರ ರೂಪಾಯಿ. ಇದರ ಬಗ್ಗೆ ಉದಾಸೀನತೆ ಮಾಡುವುದು ಬೇಡ ಎಂದು ಸರ್ಕಾರವೇ ಈ ಲಸಿಕೆಯನ್ನು ೧೪ ರಿಂದ ೧೫ ವರ್ಷದ ಒಳಗಿನ ಮಕ್ಕಳಿಗೆ ನೀಡುತ್ತಿದೆ. ಮುಂದಿನ ಭವಿಷ್ಯದಲ್ಲಿ ಆರೋಗ್ಯವಂತರಾಗಿರಲು ಯುವ ಪೀಳಿಗೆಗೆ ಮೊದಲ ಹಂತದಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಕೆ. ಮಂಜುನಾಥ್, ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಸಮಸ್ಯೆಗಳಲ್ಲಿ ಗರ್ಭ ಕಂಠ ಕ್ಯಾನ್ಸರ್ ಶೇಕಡ ೯೯.೭ ರಷ್ಟು ಮಹಿಳೆಯರಲ್ಲಿ ವೈರಸ್ ನಿಂದ ಬಂದಿರುತ್ತದೆ. ಈ ಲಸಿಕೆಯನ್ನು ತೆಗೆದುಕೊಳ್ಳುವುದರಿಂದ ಮುಂದೆ ಬರಬಹುದಾದ ಸಮಸ್ಯೆಯನ್ನು ತಡೆಯಬಹುದು ಎಂದು ಹೇಳಿದರು.
ಈ ಲಸಿಕೆ ನಮ್ಮ ದೇಶದಲ್ಲಿ ಜಾರಿಗೆ ಬರುವ ಮೊದಲು ವಿಶ್ವದ ೧೫೦ ದೇಶಗಳಲ್ಲಿ ಜಾರಿಯಲ್ಲಿತ್ತು. ಈ ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ ಎಂದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ೬,೦೭೦ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಅಂದರೆ, ಶೇಕಡ ೬೯ ರಷ್ಟು ಗುರಿಯನ್ನು ಮುಟ್ಟಲಾಗಿದೆ ಎಂದರು.
ವೈರಸ್ ನಿಂದ ಬರುವಂತಹ ರೋಗಾಣುಗಳು, ಅದರಿಂದ ಯಾರೂ ಕೂಡ ಗಾಬರಿ ಪಡುವ ಅಗತ್ಯ ಇರುವುದಿಲ್ಲ. ಈ ಲಸಿಕೆಯನ್ನು ಹಾಕಲಾಗುತ್ತಿರುವ ದೇಶಗಳಲ್ಲಿ ಶೇಕಡ ೬೦ ರಿಂದ ೭೦ರಷ್ಟು ನಿಯಂತ್ರಣಕ್ಕೆ ಬಂದಿದೆ. ಕ್ಯಾನ್ಸರ್ ತಡೆಗಟ್ಟಲು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲು ಇದೊಂದು ಕಾರ್ಯಕ್ರಮ ಸಹಕಾರಿಯಾಗಿದೆ. ಈ ಲಸಿಕೆಯ ವೆಚ್ಚ ದುಬಾರಿಯಾಗಿದೆ. ಸರ್ಕಾರ ಉಚಿತವಾಗಿ ನೀಡುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ‘ಐಸಿರಿ ಫೌಂಡೇಶನ್’ ಸಂಸ್ಥೆಯ ಅಧ್ಯಕ್ಷ ರೋಹನ್ ಭಾರ್ಗವಪುರಿ, ಪ್ರತಿಯೊಂದು ದಿನಕ್ಕೂ ಐತಿಹಾಸಿಕ ಮೌಲ್ಯ ಇರುತ್ತದೆ. ಎಚ್.ಪಿ.ವಿ. ಲಸಿಕೆಯ ಅರಿವು ಮತ್ತು ವಿತರಣಾ ಕಾರ್ಯಕ್ರಮ ಈ ದಿನ ಹಮ್ಮಿಕೊಳ್ಳಲಾಗಿದೆ. ಇಷ್ಟು ದಿನ ಹೆಣ್ಣು ಮಕ್ಕಳಿಗೆ ಮಾತ್ರ ಈ ಲಸಿಕೆ ನೀಡಲಾಗುತ್ತಿದೆ. ಆದರೆ ಸಂಶೋಧನೆ ಪ್ರಕಾರ ಗಂಡು ಮಕ್ಕಳು ಕೂಡ ಈ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
೧೫ ವರ್ಷದ ಮೊದಲೇ ಈ ಲಸಿಕೆಯನ್ನು ಪಡೆದುಕೊಂಡರೆ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದಾಗಿದೆ. ೧೫ ರಿಂದ ೨೫ ವಯೋಮಾನದ ಈ ಲಸಿಕೆಯನ್ನು ಪಡೆದುಕೊಳ್ಳದೆ ಇರುವವರಿಗೆ ಎರಡು ಡೋಸ್ ಲಸಿಕೆ ನೀಡಬೇಕಾಗುತ್ತದೆ. ೨೫ ವರ್ಷ ಮೇಲ್ಪಟ್ಟವರು, ೪೫ ವರ್ಷದ ವರೆಗೆ ಈ ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಪಡೆದಿರುವ ಹೆಚ್.ಪಿ.ವಿ. ಲಸಿಕೆಯ ಕುರಿತು ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವುದು, ಹಿರಿಯರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು. ಆರ್ಥಿಕ ಭದ್ರತೆ, ಸಾಮಾಜಿಕ ಭದ್ರತೆ ರಕ್ಷಣೆ ಬೇಕಾದರೆ ಜಾಗೃತಿ ಮತ್ತು ಜವಾಬ್ದಾರಿ ಅಗತ್ಯ. ಜಾಗೃತಿ ಮತ್ತು ಜವಾಬ್ದಾರಿ ಒಂದು ಮಾಡುವುದು ಐಸಿರಿ ಫೌಂಡೇಶನ್‌ನ ಉದ್ದೇಶವಾಗಿದೆೆ ಎಂದರು.
ನಮ್ಮಲ್ಲಿ ಭರವಸೆ ಇರಬೇಕು. ಈ ಕುರಿತು ಅರಿವು ಮೂಡಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು. ಮುಂದೆ ಬರಬಹುದಾದ ಸವಾಲುಗಳನ್ನು ಎದುರಿಸಬೇಕು. ಸಿಕ್ಕಿಂ ರಾಜ್ಯದಲ್ಲಿ ನೂರರಷ್ಟು ಲಸಿಕೆಯನ್ನು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಅದೇ ಮಾದರಿಯಲ್ಲಿ ಗುರಿ ಮುಟ್ಟಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿಕ್ಕಮಗಳೂರು ತಾಲೂಕು ತಹಸೀಲ್ದಾರ್ ರೇಷ್ಮಾ ಶೆಟ್ಟಿ ಮಾತನಾಡಿ, ನಾವು ಬಳಸುವ ವಸ್ತುಗಳು ಸುರಕ್ಷಿತವಾಗಿ ಇದಿಯಾ, ಸ್ನೇಹಿಯಾಗಿ ಇದಿಯಾ ಎಂಬುದು ತಿಳಿದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಸಂತ ಜೋಸೆಫರ ಪ್ರೌಢಶಾಲೆ ಪ್ರಾಚಾರ್ಯೆ ಸಿಸ್ಟರ್ ಜೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್. ಸೀಮಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net