ಚಿಕ್ಕಮಗಳೂರು:ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಸಿ.ಟಿ. ರವಿ ಅವರು ಯಾವುದೇ ಮುಸ್ಲಿಮರ ವಿರುದ್ಧ ಮಾತನಾಡಿಲ್ಲ. ದೇಶ ವಿರೋಧಿ ಹಾಗೂ ದುಷ್ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಮಾತ್ರ ಧ್ವನಿ ಎತ್ತಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ.ಎನ್. ವಿಜಯಕುಮಾರ್ ಗುಣಸಾಗರ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ. ರವಿ ಅವರು ಹುಟ್ಟಿ ಬೆಳೆದಿರುವುದು ಚಿಕ್ಕಮಗಳೂರು ನೆಲದಲ್ಲೇ ಹೊರತು ಪಾಕಿಸ್ತಾನದಲ್ಲಲ್ಲ. ಈ ವಿಚಾರವನ್ನು ಎಸ್‌ಡಿಪಿಐ ಕಾರ್ಯಕರ್ತರು ಮೊದಲು ಅರಿತುಕೊಳ್ಳಬೇಕು ಎಂದು ಹೇಳಿದರು.
ಎಸ್‌ಡಿಪಿಐ ನಾಯಕರು ನಗರಕ್ಕೆ ಬರಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ ಬಳಿಕ ರವಿ ಅವರು ಬುಧವಾರ ರಾಜಾರೋಷವಾಗಿ ಚಿಕ್ಕಮಗಳೂರಿಗೆ ಆಗಮಿಸಿ ನಗರದಲ್ಲೇ ಸಂಚರಿಸಿದ್ದಾರೆ. ಆ ವೇಳೆ ಅವರನ್ನು ತಡೆಯುವುದಾಗಿ ಹೇಳಿದವರು ಎಲ್ಲಿದ್ದರು? ನಿಮಗೆ ತಾಕತ್ತಿದ್ದರೆ ನಮ್ಮ ನಾಯಕರನ್ನು ತಡೆಯಿರಿ ಎಂದು ಸವಾಲು ಹಾಕಿದರು.
ಸಿ.ಟಿ. ರವಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಸಮುದಾಯದ ವಿರುದ್ಧ ಮಾತನಾಡಿಲ್ಲ. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ಮಾತ್ರ ಮಾತನಾಡಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡವರAತೆ ಎಸ್‌ಡಿಪಿಐ ವರ್ತಿಸುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣ ಹಾಗೂ ಪಹಲ್ಗಾಮ್ ಘಟನೆಯಲ್ಲಿ ಹಿಂದೂಗಳ ಹತ್ಯೆ ಸೇರಿದಂತೆ ದೇಶ ವಿರೋಧಿ ಕೃತ್ಯಗಳನ್ನು ಎಸ್‌ಡಿಪಿಐ ಸಮರ್ಥಿಸುತ್ತದೆಯೇ? ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಡಾ. ಸಿ.ಟಿ. ರವಿ ಅವರು ದೇಶದಲ್ಲಿ ಸಮ್ಮಿಶ್ರ ಸರ್ಕಾರಗಳು ಮತ್ತು ಸವಾಲುಗಳು ಎಂಬ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದು, ಅಂತಹ ನಾಯಕರ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದು ಖಂಡನೀಯ ಎಂದು ಹೇಳಿದರು.
ಕಾಂಗ್ರೆಸ್‌ನ ಕೆಲ ಮುಖಂಡರು ಪಕ್ಷದಲ್ಲಿ ತಮ್ಮ ಅಸ್ತಿತ್ವ ತೋರಿಸಿಕೊಳ್ಳುವ ಉz್ದೆÃಶದಿಂದ ಆಗಾಗ ಸಿ.ಟಿ. ರವಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸೀತಾರಾಮ ಭರಣ್ಯ, ಪ್ರಕಾಶ್, ಲೀಲಾ ಹಾಗೂ ರಾಜೀವ್ ಉಪಸ್ಥಿತರಿದ್ದರು.