ಮಳೆಗಾಲದ ಸಿದ್ಧತೆ, ರಸ್ತೆ, ಸೇತುವೆಗಳ ಸುರಕ್ಷೆಗಾಗಿ ಭಾರತೀಯ ರಸ್ತೆ ಕಾಂಗ್ರೆಸ್ ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರತ್ಯೇಕ ಹಾಗೂ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿವೆ. ಮುಂಗಾರು ಆರಂಭಕ್ಕೆ ಕನಿಷ್ಠ ಎರಡು ತಿಂಗಳು ಮುಂಚಿತವಾಗಿ ಎಲ್ಲ ಸೇತುವೆಗಳ ತಪಾಸಣೆ ಮಾಡಬೇಕು. ಸೇತುವೆಯ ಬೇರಿಂಗ್‌ಗಳು, ಜಾಯಿಂಟ್‌ಗಳು ರಸ್ತೆ ಮತ್ತು ಸೇತುವೆ ಕೂಡುವ ಜಾಗ ಮತ್ತು ರೇಲಿಂಗ್‌ಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ ದುರಸ್ತಿ ಮಾಡಬೇಕು. ಮಳೆಗಾಲದಲ್ಲಿ ರಸ್ತೆ ಕುಸಿಯದಂತೆ ತಡೆಯಲು ರಸ್ತೆಯ ಮೇಲ್ಮೈಯಲ್ಲಿರುವ ಹೊಂಡಗಳನ್ನು ಮತ್ತು ಬಿರುಕುಗಳನ್ನು ಜಲನಿರೋಧಕ ಮಿಶ್ರಣಗಳಿಂದ ಮುಚ್ಚಬೇಕು. ರಸ್ತೆಯ ಮೇಲಿನ ನೀರು 10ರಿಂದ 15 ನಿಮಿಷಗಳಿಗಿಂತ ಹೆಚ್ಚು ಕಾಲ ನಿಲ್ಲದಂತೆ ಚರಂಡಿಗಳನ್ನು ಇಳಿಜಾರು ಮಾಡಬೇಕು ಮತ್ತು ಹೂಳುಮುಕ್ತವಾಗಿರಬೇಕು. ಹೀಗೆ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಪ್ರಧಾನ ಕಚೇರಿಯಿಂದ ಎಲ್ಲ ಜಿಲ್ಲಾ ಇಂಜಿನಿಯರ್‌ಗಳಿಗೆ ಹೊರಡಿಸುವ ಅಧಿಕೃತ ಸುತ್ತೋಲೆಯಂತೆ ಮೇ 15 ಅಥವಾ ಮೇ 31ರ ಒಳಗಾಗಿ ರಸ್ತೆ ಬದಿ ಹೂಳೆತ್ತುವುದು ಮತ್ತು ಪ್ಯಾಚ್‌ವರ್ಕ್ ಮುಗಿಯಬೇಕು. ರಸ್ತೆ ಬದಿಯ ಜಂಗಲ್ ಕಟಿಂಗ್, ಹೆದ್ದಾರಿಯ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಕತ್ತರಿಸಬೇಕು. ಈ ಹಿಂದೆ ಕುಸಿದಿದ್ದ ರಸ್ತೆ ಅಥವಾ ಸೇತುವೆಗಳನ್ನು ಅತ್ಯಂತ ಸೂಕ್ಷ್ಮ ವಲಯ ಎಂದು ಗುರುತಿಸಿ ಅಲ್ಲಿ ಹೆಚ್ಚುವರಿ ನಿಗಾ ಇಡಬೇಕು. ಆದರೆ ಈ ಎಲ್ಲ ನಿಯಮಗಳನ್ನು ಕುದುರೆಮುಖ ರಸ್ತೆಯ ವಿಚಾರದಲ್ಲಿ ಇಲಾಖೆ ಅಧಿಕಾರಿಗಳು ಉಲ್ಲಂಘಿಸಿದ್ದಾರೆ.