ಶೃಂಗೇರಿ: ನರೇಂದ್ರ ಮೋದಿ ಆಡಳಿತದಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸ್ವಚ್ಛ ಭಾರತ್ ಯೋಜನೆಯಡಿ ಮನೆ ಮನೆಗಳಿಗೆ ಶೌಚಗೃಹ ಸೌಲಭ್ಯ ನೀಡಲಾಗಿದ್ದು 12 ವರ್ಷಗಳ ಅಡಳಿತದಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರ ಮೂಲ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಪಟ್ಟಣದ ಚಪ್ಪರದಾಂಜನೇಯ ದೇವಾಲಯದ ಸಭಾಂಗಣದಲ್ಲಿ ಬಿಜೆಪಿ ಮಂಡಲ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಆಯುಷ್ಮಾನ್ ಕಾರ್ಡ್ ನೀಡುವ ಮೂಲಕ ಆರೋಗ್ಯ ರಕ್ಷಣೆಗೆ ಹೆಚ್ಚು ಕಾಳಜಿ ವಹಿಸಿದೆ. ಒಂದು ಸಾವಿರ ಮಹಿಳೆಯರಲ್ಲಿ ಶೇಕಡಾ 2.5ರಷ್ಟು ಮಹಿಳೆಯರಿಗೆ ಗರ್ಭಕೋಶದ ಕಾನ್ಸರ್ ಕಾಣಿಸಿಕೊಂಡಿದ್ದು, ಅದರ ನಿವಾರಣೆಗಾಗಿ ಪೂರ್ವಭಾವಿಯಾಗಿ ಲಸಿಕೆ ಅನುಷ್ಠಾನಗೊಳಿಸಿದೆ. ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೊಂಡರೂ ಅದನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿ ಜನರಿಗೆ ತಲುಪಿಸುವಲ್ಲಿ ವಿಫಲವಾಗಿದೆ. ಪ್ರಧಾನಮಂತ್ರಿ ವಸತಿ ಯೋಜಯಡಿ ರಾಜ್ಯ ಸರ್ಕಾರಕ್ಕೆ ಅನುದಾನ ನೀಡಿದ್ದರೂ ಇದುವರೆಗೂ ಮನೆ ನಿರ್ಮಾಣ ಮಾಡಿಲ್ಲ ಎಂದು ಆರೋಪಿಸಿದರು.
ಸರ್ಕಾರ ಜಲಮೂಲವನ್ನು ಗಮನಿಸದೇ ಅಸಮರ್ಪಕವಾಗಿ ಜಲಜೀವನ್ ಮಿಷನ್ ಕಾಮಗಾರಿ ನಿರ್ವಹಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಜಾಗತಿಕವಾಗಿ ಅಭಿವೃದ್ಧಿಯಲ್ಲಿ 16ನೇ ಸ್ಥಾನದಲ್ಲಿದ್ದ ಭಾರತ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ. ಎಸ್‌ಐಆರ್ ಕಾರ್ಯ ನಿರ್ವಹಿಸಲು ಅಂಗನವಾಡಿ ಶಿಕ್ಷಕರು ಬಳಸಿಕೊಳ್ಳಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಹಿಂದೆಯೂ ನಡೆದಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ತಲಗಾರ್ ಉಮೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ವೇಣುಗೋಪಾಲ್, ನೂತನ್‌ಕುಮಾರ್, ಬಿಜೆಪಿ ಎಸ್ಸಿ ಮೋರ್ಚಾ ವಕ್ತಾರ ಬಿ.ಶಿವಶಂಕರ್, ಮುಖಂಡರಾದ ಅರುಣ್‌ಕುಮಾರ್, ಮಣಿಕಂಠ ಕಂದಸ್ವಾಮಿ ಹಾಜರಿದ್ದರು.