

ಶೃಂಗೇರಿ: ಮಲೆನಾಡಿನಲ್ಲಿ ಪಾರಂಪರಿಕವಾಗಿ ನಡೆದು ಬಂದ ಭೂಮಿ ಹುಣ್ಣಿಮೆ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಹಲವು ಕಡೆ ಸೆಗಣಿ ಉಂಡೆಯಿಂದ ಗಣಪತಿ ತಯಾರಿಸಿ ಅದಕ್ಕೆ ಹಾಲು ಎರೆದು, ಹೂ,ಅರಶಿಣ, ಕುಂಕುಮ, ವೀಳ್ಯದೆಲೆ,ಅಡಿಕೆ ಇತ್ಯಾದಿ ಹಣ್ಣುಗಳನ್ನು ಸಮರ್ಪಿಸಿ ಪೂಜೆ ಸಲ್ಲಿಸಿದರು. ಬೆಳಗ್ಗೆ ತಾವು ಬೆಳೆದ ಸಾಗುವಳಿ ಜಮೀನಿನಲ್ಲಿ ಎಡೆ ಇಟ್ಟು ಅಚ್ಚ ಅಂಬಲಿ, ಹಾಲು ಅಂಬಲಿ, ಬಣ್ಣದ ಸೌತೆಕಾಯಿ, ಬೇಲಿ ಮೇಲಿನ ಹೀರೆಕಾಯಿಯನ್ನು ಭೂಮಿ ತಾಯಿಗೆ ಬೈಕೆ ಬೈಕೆ ಎಂದು ಶ್ರದ್ಧಾ ಭಕ್ತಿಯಿಂದ ಹಾಡುತ್ತಾ ತಾಲೂಕಿನ ರೈತರು ಬೆಳಗ್ಗೆ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ಭೂಮಿ ಹುಣ್ಣಿಮೆಯ ಹಿಂದಿನ ದಿನ ಭೂಮಿ ಪೂಜೆಗಾಗಿ ಸಾಗುವಳಿ ಜಮೀನಿನ ಸಮೀಪ ಪೂಜೆ ಮಾಡಲು ಸ್ಥಳ ಮಟ್ಟಮಾಡಿ, ಸಗಣಿ ಸಾರಿಸಿ, ಬಾಳೆ ಕಂಬಗಳು, ಮಾವಿನ ಸೊಪ್ಪಿನ ತೋರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ಸಾಲಂಕೃತಗೊಂಡ ಮಂಟಪ ಮಾಡಿದರು. ಸೋಮವಾರ ಮುಂಜಾನೆ ಗದ್ದೆಗೆ ಪೂಜಿಸಲು ಬೇಕಾಗುವ ತೆಂಗಿನಕಾಯಿ,ವಿವಿಧ ಹೂಗಳು,ಅರಶಿನ ಕುಂಕುಮ, ಹಾಲು ಮುಂತಾದ ಪೂಜಾ ಸಾಮಾಗ್ರಿಗಳನ್ನು ಜಮೀನಿನ ಬಳಿ ಇರಿಸಿ ಶಂಖನಾದ, ಜಾಗಟೆ, ಪಟಾಕಿ ಸಿಡಿಸಿ ಪೂಜೆ ನೆರವೇರಿಸಲಾಯಿತು. ಹಲವಾರು ಜಾತಿ ಮರ ಗಿಡಗಳ ಸೊಪ್ಪುಗಳನ್ನು ಸೇರಿಸಿ ಮಾಡಿದ ಬೆರಕೆ ಸೊಪ್ಪಿನ ಪಲ್ಯ, ಬೆಲ್ಲ ಹಾಕಿ ಗೆಣಸು ಬೇಯಿಸಿ ತಯಾರಿಸಿದ ಸಿಹಿ ಪದಾರ್ಥ, ಪಾಯಸ, ಬಣ್ಣದ ಸೌತೆಕಾಯಿ ಪಲ್ಯ, ಚೀನಿಕಾಯಿ, ಸೋರೆಕಾಯಿ ಕಡಬು, ಸಾರು, ಅನ್ನ ಹೀಗೆ ವಿಶೇಷವಾಗಿ ತಯಾರಿಸಿದ ಅಡುಗೆಯನ್ನು ಸಾಗುವಾಳಿ ಗದ್ದೆಯ ಸಮೀ ಇಟ್ಟು ಉತ್ತಮ ಸಲು ನೀಡಿ ನಮ್ಮನ್ನು ಕಾಪಾಡು ತಾಯಿ ಎಂದು ಕುಟುಂಬಸ್ಥರು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.