ತರೀಕೆರೆ: ತರೀಕೆರೆ ಹಾಗೂ ಅಜ್ಜಂಪುರ ತಾಲೂಕು ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಕೊಳ್ಳ ಕೋವಿಗಳ ಗುಂಡಿನ ಮೊರೆತಕ್ಕೆ ವನ್ಯಜೀವಿಗಳ ಸಂತತಿ ಹಂತ ಹಂತವಾಗಿ ನಾಶವಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.
ಭದ್ರಾವತಿ ಅರಣ್ಯ ವಿಭಾಗ ವ್ಯಾಪ್ತಿಯ ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿನ ವಿವಿಧ ವಲಯಾರಣ್ಯ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಬೇಟೆ, ಅಕ್ರಮ ಮಾಂಸ ಮಾರಾಟ ಹೆಚ್ಚಾಗಿದೆ. ತರೀಕೆರೆ ವಲಯಾರಣ್ಯ ವ್ಯಾಪ್ತಿಯ ರಾಮನಹಳ್ಳಿ, ಲಕ್ಕೇನಹಳ್ಳಿ, ನಾಗೇನಹಳ್ಳಿ, ಗಣೇಶಪುರ, ಭೈರನಾಯಕನಹಳ್ಳಿ, ರಾಗಿ ಬಸವನಹಳ್ಳಿ, ಹಾದಿಕೆರೆ, ಹುಣಸಘಟ್ಟ, ಅತ್ತಿಗನಾಳು, ಜಂಬದಹಳ್ಳ ಮರಾಠಿ ಕ್ಯಾಂಪ್, ನಂದಿಬಟ್ಟಲು, ಉಡೇವಾ, ಸೈದುಖಾನ್, ಹಳೇ, ಹೊಸ ಗಂಗೂರು, ಸಂತವೇರಿ ಹಾಗೂ ಅಜ್ಜಂಪುರ ವಲಯಾರಣ್ಯದ ಕೆಂಚಾಪುರ, ಶಿರಗಲಿಪುರ, ಜಲಧೀಹಳ್ಳಿಯ ಗುಡ್ಡಗಾಡು ಪ್ರದೇಶ, ಲಕ್ಕವಳ್ಳಿ ವಲಯ ವ್ಯಾಪ್ತಿಯ ಕಾಡು ಸೆರಗಿನ ಗ್ರಾಮಗಳು, ತಣಿಗೇಬೈಲು ವನ್ಯಜೀವಿ ವಿಭಾಗದ, ಹುಣಸೇಬೈಲು, ದೂಪದಖಾನ್, ತಿಮ್ಮನಬೈಲು ಇತರ ಕಡೆ ನಿರಂತರವಾಗಿ ಒಂದಿಲ್ಲೊಂದು ಮೂಕಜೀವಿಗಳು ಗುಂಡೇಟಿಗೆ ಬಲಿಯಾಗುತ್ತಿವೆ.
ಅರಣ್ಯ ಪ್ರದೇಶ ವ್ಯಾಪ್ತಿಯ ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳು ಬೇಟೆಗಾರರ ಪ್ರಮುಖ ತಾಣವಾಗಿದ್ದು, ನೀರಡಿಕೆ ನೀಗಿಸಿಕೊಳ್ಳಲು ಬರುವ ಜಿಂಕೆ, ಕಡವೆ, ಕಾಡುಕುರಿ ಇತರ ಕಾಡು ಪ್ರಾಣಿಗಳನ್ನು ಕಳ್ಳ ಕೋವಿ, ಮದ್ದು, ಗುಂಡು ಬಳಸಿ ಶಿಕಾರಿ ಮಾಡಲಾಗುತ್ತಿದೆ. ಜತೆಗೆ ರೈಲಿಗೆ ಅಡ್ಡ ಓಡಿಸಿ, ವಿದ್ಯುತ್ ತಂತಿ ಸ್ಪರ್ಶಿಸುವಂತೆ ಯೋಜನೆ ರೂಪಿಸಿ ಹತ್ಯೆ ಮಾಡಲಾಗುತ್ತಿದೆ. ಉರುಳು ಹಾಕಿ ಕಾಡುಮೊಲ, ಕಾಡುಹಂದಿ, ನವಿಲು ಮತ್ತಿತರ ಪ್ರಾಣಿಗಳನ್ನು ಸುಲಭವಾಗಿ ಹಿಡಿದು ಕೊಲ್ಲಲಾಗುತ್ತಿದೆ.
ಭದ್ರಾವತಿ ಅರಣ್ಯ ವಿಭಾಗ ವ್ಯಾಪ್ತಿಯ ಅಜ್ಜಂಪುರ ಹಾಗೂ ತರೀಕೆರೆ ತಾಲೂಕಿನ ಕಾಡಂಚಿನ ಬಹುತೇಕ ಗ್ರಾಮಗಳಲ್ಲಿ ಬೇಟೆಗಾರರು ಕಡವೆ, ಜಿಂಕೆ, ಕಾಡು ಹಂದಿ, ಮುಳ್ಳು ಹಂದಿ, ಕಾಡುಕುರಿ, ಮೊಲ, ನವಿಲುಗಳನ್ನು ಬೇಟೆಯಾಡಿ ಒಂದಿಷ್ಟು ಮಾಂಸವನ್ನು ಬಳಸಿ ಉಳಿದ ಮಾಂಸ, ಕೊಂಬು, ಚರ್ಮ, ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತರೀಕೆರೆ ವಲಯ ವ್ಯಾಪ್ತಿಯ ಸಾವೇಮರಡಿ ಕಾವಲ್‌ನಲ್ಲಿ ಮುಳ್ಳುಹಂದಿ ಹತ್ಯೆ ಸಾಯಿಸಿ ಗುಪ್ತವಾಗಿರಿಸಿದ್ದ ಪ್ರಕರಣ ವನ್ಯಜೀವಿ ಬೇಟೆ ಹಿಂದಿನ ದಂಧೆಗೆ ಹಿಡಿದ ಕನ್ನಡಿಯಾಗಿದೆ.
ವನ್ಯಜೀವಿಗಳನ್ನು ಬೇಟೆಯಾಡುವುದನ್ನು ಪ್ರವೃತ್ತಿಯಾಗಿಸಿಕೊಂಡವರ ಹೆಡೆಮುರಿ ಕಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿ ಕಾಡುಪ್ರಾಣಿಗಳ ಸಂತತಿ ಉಳಿವಿಗೆ ಮುಂದಾಗಬೇಕಿದೆ.
ತರೀಕೆರೆ ವಲಯಾರಣ್ಯದಲ್ಲಿ ಭದ್ರಾ ಬಲದಂಡೆ ನಾಲೆ ನೀರು ಹರಿದು ಹೋಗುತ್ತಿರುವ ಜೋಡಿಕೋಡಿಹಳ್ಳಿ ಸುತ್ತಮುತ್ತಲ ಜಮೀನು ಮತ್ತು ಅಡಿಕೆ ತೋಟಗಳು, ಹಾದಿಕೆರೆ ಸಮೀಪದ ಮಲ್ಲಯ್ಯನಹೊಂಡ, ಋಷಿಪುರ ಅರಣ್ಯ ಪ್ರದೇಶ, ಕಲ್ಲತ್ತಿಗಿರಿ ಸಮೀಪದ ಶಂಕರ್ ಫಾಲ್ಸ್, ಸಂತವೇರಿ ಬಳಿಯ ಭೂತಪ್ಪನ ಘಾಟಿ, ತಣಿಗೇಬೈಲು ವನ್ಯಜೀವಿ ವಿಭಾಗದ ಹುಣಸೇಬೈಲು ಇತರ ಕಡೆ ಕಾಡುಪ್ರಾಣಿಗಳ ಚಲನವಲನವಿರುವ ಹತ್ತಾರು ಮೈನ್ ಸ್ಪಾಟ್‌ಗಳು, ವನ್ಯಜೀವಿಗಳ ಜೀವಕ್ಕೆ ಕಂಟಕವಾಗಿವೆ.
ಕೆಲ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪ್ರತ್ಯಕ್ಷದರ್ಶಿಗಳಿಂದ ಒತ್ತಡವಿದ್ದರಷ್ಟೇ ಬೇಟೆ ಪ್ರಕರಣ ಭೇದಿಸಲು ಕಾರ್ಯತಂತ್ರ ರೂಪಿಸಿ ರೈಡ್ ಮಾಡುತ್ತಾರೆ. ಇಲ್ಲದಿದ್ದರೆ ಗಮನಕ್ಕೆ ಬಂದರೂ ಬೇಟೆಗಾರರ ಜತೆ ಶಾಮೀಲಾಗಿ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಒಮ್ಮೊಮ್ಮೆ ಕಾಡುಪ್ರಾಣಿಗಳ ಮಾಂಸದ ಪಾಲು ಪಡೆದುಕೊಳ್ಳುವ ಸಿಬ್ಬಂದಿ, ಹೊರಗುತ್ತಿಗೆ ನೌಕರರು ಬೇಟೆಗಾರರಿಗೆ ದಾಳಿ ಮಾಹಿತಿ ರವಾನಿಸಿ ಅಧಿಕಾರಿಗಳ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪವೂ ಸಾರ್ವಜನಿಕರ ವಲಯದಿಂದ ಕೇಳಿಬರುತ್ತಿದೆ.
ಕೆಲವೊಮ್ಮ ಕಾಡುಪ್ರಾಣಿಗಳ ಬೇಟೆ ಪ್ರಕರಣದಲ್ಲಿ ಬೇಟೆಗಾರರ ರಕ್ಷಣೆಗೆ ನಿಲ್ಲುವ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಅರಣ್ಯ ಇಲಾಖೆ ಅಧಿಕಾರಿಗಳು ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಚಿರತೆ ಬಿಟ್ಟು ಆತಂಕ ಸೃಷ್ಟಿಸುವ ಯೋಜನೆ ರೂಪಿಸುತ್ತಿದ್ದಾರೆ. ಈ ತಂತ್ರದಿಂದ ಅಮಾಯಕರ ಜೀವ ಬಲಿಯಾಗುತ್ತಿದೆಯೇ ಹೊರತು ರಾತ್ರಿ ಹೊತ್ತು ಕಾಡಿನಲ್ಲಿ ಅಲೆದಾಡುವ ಬೇಟೆಗಾರರ ಜೀವಕ್ಕೆ ಯಾವುದೇ ಹಾನಿಯಾಗುತ್ತಿಲ್ಲ. ಅಧಿಕಾರಿಗಳು ಈ ತಂತ್ರ ಕೈಬಿಟ್ಟು ಬೇರೆ ಮಾರ್ಗ ಅನುಸರಿಸಲಿ ಎಂಬುವುದು ಸಾರ್ವಜನಿಕರ ಆಗ್ರಹ.
ಬೇಟೆಗಾರರು ನಿತ್ಯ ಸಂಪರ್ಕದಲ್ಲಿದ್ದು, ಗುಪ್ತವಾಗಿ ವ್ಯವಹರಿಸುವವರಿಗಷ್ಟೇ ಜಿಂಕೆ, ಕಡವೆ, ಕಾಡು ಹಂದಿ ಮತ್ತಿತರ ವನ್ಯಜೀವಿಗಳ ಮಾಂಸ ಗುಡ್ಡೆ ಹಾಕಿ ನಿಗದಿಪಡಿಸಿದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಕೆಮ್ಮಣ್ಣುಗುಂಡಿ ನೆತ್ತಿಚೌಕದಲ್ಲಿ ಬೇಟೆಯಾಡಿ ಸಿಕ್ಕಿಬಿದ್ದಿದ್ದ ಟೆಕ್ಕಿಗಳು, ಶಾರ್ಪ್ ಶೂಟರ್‌ಗಳು ಜೈಲುವಾಸ ಅನುಭವಿಸಿದ ಪ್ರಕರಣ, ಹಾನೂರಿನ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಲು ಹೋಗಿ ಎನ್‌ಕೌಂಟರ್ ಮೂಲಕ ಜೀವ ಕಳೆದುಕೊಂಡರೂ ಬೇಟೆಗಾರರಿಗೆ ಭಯ ಇಲ್ಲದಂತಾಗಿದೆ. ಬೇಟೆಗಾರರು ಕಾಡುಪ್ರಾಣಿಗಳ ಶಿಕಾರಿ ಸಲುವಾಗಿಯೇ ಪರವಾನಗಿ ಇಲ್ಲದ ಕೋವಿಗಳನ್ನು ಖರೀದಿಸಿ ತರುತ್ತಿದ್ದರೆ. ಅರಣ್ಯ ಇಲಾಖೆ ಜತೆಗೆ ರಕ್ಷಣಾ ಇಲಾಖೆ ಅಧಿಕಾರಿಗಳು ತೀವ್ರ ನಿಗಾವಹಿಸಿ ಕಳ್ಳಕೋವಿಗಳನ್ನು ಪತ್ತೆಹಚ್ಚಬೇಕಿದೆ.