ಕಡೂರು: ಪತಿ-ಪತ್ನಿಯ ನಡುವಿನ ಕೌಟುಂಬಿಕ ಕಲಹಕ್ಕೆ ಬೇಸತ್ತು ಹೆಣ್ಣು ಕೊಟ್ಟ ಮಾವನೇ ತನ್ನ ಕುಟುಂಬಸ್ಥರ ಜತೆಗೂಡಿ ಅಳಿಯನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಾಲೂಕಿನ ಆಲದಹಳ್ಳಿತಾಂಡ್ಯದಲ್ಲಿ ನಡೆದಿದೆ.
ಆಲದಹಳ್ಳಿ ತಾಂಡ್ಯದ ದೇವರಾಜ್ ನಾಯ್ಕ(35) ಮೃತ ಅಳಿಯ. ಅದೇ ಗ್ರಾಮದ ಮಾವ ರಾಜಾನಾಯ್ಕ, ಸಚಿನ್ (ಮಗ), ಭಾರತಿ ಬಾಯಿ(ಅತ್ತೆ), ಕಾವ್ಯಾ ಬಾಯಿ(ಸೊಸೆ) ಕೊಲೆ ಮಾಡಿದ ಆರೋಪಿಗಳು. 13 ವರ್ಷಗಳ ಹಿಂದೆ ರಾಜಾನಾಯ್ಕ ರ ಮಗಳಾದ ರೇಖಾಬಾಯಿಯನ್ನು ದೇವರಾಜ್‌ನಾಯ್ಕಗೆ ಮದುವೆ ಮಾಡಿಕೊಟ್ಟಿದ್ದರು. ಸಂಸಾರದಲ್ಲಿ ಕಲಹ ಉಂಟಾಗಿ ಮದುವೆಯಾದ ಒಂದೇ ತಿಂಗಳಲ್ಲಿ ಬೇರೆಯಾಗಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ದೂರ ಉಳಿದಿದ್ದರು.
ಇದರಿಂದ ಮಾನಸಿಕವಾಗಿ ಜಿಗುಪ್ಸೆಗೊಂಡಿದ್ದ ದೇವರಾಜ್‌ನಾಯ್ಕ ನಾನು ಪತ್ನಿಯೊಡನೆ ಒಟ್ಟಾಗಿ ಸಂಸಾರ ನಡೆಸಬೇಕು ಎಂಬ ಮಾನವ ಜತೆಗೆ ಮಾತುಕತೆ ನಡೆಸುತ್ತಿದ್ದಾಗ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಮದ್ಯವ್ಯಸನಿಯಾಗಿದ್ದ ದೇವರಾಜ್‌ನಾಯ್ಕನಿಗೆ 23ರ ರಾತ್ರಿ ಮಾವ ರಾಜಾನಾಯ್ಕ ಹಾಗೂ ಕುಟುಂಬಸ್ಥರು ಸೇರಿ ತೆಂಗಿನ ತೋಟದಲ್ಲಿ ಕಬ್ಬಿಣ ಆಯುಧ ಮತ್ತು ಸೌದೆ ಪಟ್ಟಿಯಿಂದ ಬರ್ಬರವಾಗಿ ಹೊಡೆದು ಕೊಲೆ ಮಾಡಿರುವುದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಮೃತನ ತಾಯಿ ಗಂಗೀಬಾಯಿ ನಾಲ್ವರ ವಿರುದ್ಧ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪಿಎಸ್‌ಐ ಜಿ.ಮಂಜುನಾಥ್ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.