ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ 13ರಿಂದ ಶ್ರಾವಣ ತಪೋನುಷ್ಠಾನ

ಇಷ್ಟಲಿಂಗ ಪೂಜಾ ನಿರತ ರಂಭಾಪುರಿ ಶ್ರೀ.
ಇಷ್ಟಲಿಂಗ ಪೂಜಾ ನಿರತ ರಂಭಾಪುರಿ ಶ್ರೀ.
Published on
ಬಾಳೆಹೊನ್ನೂರು: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನ ಆ.13ರಿಂದ ಸೆ.11ರವರೆಗೆ ನಡೆಯಲಿದೆ.
ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳು ಜಗದ್ಗುರುಗಳು ಪ್ರತಿ ದಿನ ಬೆಳಗ್ಗೆ 8.30ಕ್ಕೆ ಇಷ್ಟಲಿಂಗ ಮಹಾಪೂಜೆ ನೆರವೇರಿಸಲಿದ್ದು, ಸೇವಾಕರ್ತರು ಹಾಗೂ ಭಕ್ತಾದಿಗಳು ಮಹಾಪೂಜೆಯಲ್ಲಿ ಪಾಲ್ಗೊಳ್ಳಬಹುದು. ಆ.16ರಂದು ಶ್ರೀಮದ್ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೋತ್ಸವ ನಡೆಯಲಿದ್ದು, ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯ ಸಮುದಾಯದಿಂದ ದಾಸೋಹ ನೆರವೇರಲಿದೆ.
20ರಂದು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರ ಲಿಂಗಾಂಗ ಸಾಮರಸ್ಯದ ಪುಣ್ಯ ಸ್ಮರಣೆ ನಡೆಯಲಿದ್ದು, ಆಲ್ದೂರು ಹೋಬಳಿ ವೀರಶೈವ ಸಮಾಜದವರು ಪೂಜಾ ಹಾಗೂ ದಾಸೋಹ ಸೇವೆ ನೆರವೇರಿಸಲಿದ್ದಾರೆ. ಶ್ರಾವಣ ಮಾಸ ಪರ್ಯಂತರ ಮಹಾರುದ್ರಾಭಿಷೇಕ ಹಾಗೂ ಸಿಹಿ ಪ್ರಸಾದ ವಿತರಣೆ ಸೇವೆಯನ್ನು ಭದ್ರಾವತಿಯ ಲಿಂ. ಎಸ್.ಜಿ.ಶಿವಶಂಕರಯ್ಯನವರ ಕುಟುಂಬಸ್ಥರು ನೆರವೇರಿಸಲಿದ್ದಾರೆ.
ಪ್ರತಿನಿತ್ಯ ಶ್ರೀಪೀಠದ ಎಲ್ಲ ದೈವಗಳಿಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ ಮಹಾಮಂಗಲ ವಿಶೇಷ ಪೂಜೆ ನಡೆಯುತ್ತವೆ. ಪ್ರತಿ ನಿತ್ಯ ಸಂಜೆ 7ಗಂಟೆಗೆ ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ಶ್ರೀಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡುವರು. ಪ್ರತಿ ಸೋಮವಾರ ಮತ್ತು ಗುರುವಾರ ಶ್ರೀ ರಂಭಾಪುರಿ ಜಗದ್ಗುರುಗಳವರು ಸಭೆಗೆ ಆಗಮಿಸಿ ಶುಭಾಶೀರ್ವಾದ ಸಂದೇಶ ನೀಡಲಿದ್ದಾರೆ.
ಶ್ರಾವಣ ಪವಿತ್ರ ಸಂದರ್ಭದಲ್ಲಿ ಆಗಮಿಸುವ ಪಟ್ಟಾಧ್ಯಕ್ಷರಿಂದ ಹಾಗೂ ವಾಗ್ಮಿಗಳಿಂದ ನುಡಿಸೇವೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಭಕ್ತಾಧಿಗಳಿಗೆ ತ್ರಿಕಾಲ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡನ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net