ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ ರೈಲ್ವೇ ಮಾರ್ಗ ಪ್ರಸ್ತಾಪ

ಕೋಟಾ ಶ್ರೀನಿವಾಸಪೂಜಾರಿ
ಕೋಟಾ ಶ್ರೀನಿವಾಸಪೂಜಾರಿ
Published on
ಬಾಳೆಹೊನ್ನೂರು: ಶಿವಮೊಗ್ಗ-ಮಂಗಳೂರು ರೈಲ್ವೇ ಯೋಜನೆಯು ಶಿವಮೊಗ್ಗದಿಂದ ತೀರ್ಥಹಳ್ಳಿ-ಶೃಂಗೇರಿ ಬರುವ ಪ್ರಸ್ತಾಪ ವರದಿಯಲ್ಲಾಗಿದೆ. ಆದರೆ ಎನ್.ಆರ್.ಪುರದವರು ಈ ಹಿಂದೆಯೇ ಎನ್.ಆರ್.ಪುರಕ್ಕೆ ರೈಲ್ವೇ ಹಳಿಯಿದ್ದು, ಅದರ ಮೂಲಕವೇ ಹಾದು ಹೋಗಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ರೈಲ್ವೇ ಮಾರ್ಗದ ಬಗ್ಗೆ ಪರಿಸರವಾದಿಗಳು ಹಾಗೂ ಕೆಲವು ಸಣ್ಣಪುಟ್ಟ ತೊಂದರೆಗಳಿವೆ. ಈ ಬಗ್ಗೆ ಒಂದು ಬಾರಿ ಸಭೆ ನಡೆಸಿದರೂ ಸಮಸ್ಯೆ ಪೂರ್ಣ ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಧಿವೇಶನದ ನಂತರ ಮತ್ತೊಮ್ಮೆ ಈ ಬಗ್ಗೆ ಸಭೆ ನಡೆಸಿ ಪರಿಸರಕ್ಕೆ ಕಡಿಮೆ ಹಾನಿ ಮಾಡುವ ಹಾಗೂ ಜನರಿಗೆ ಅನುಕೂಲ ಆಗುವ ಮಾರ್ಗವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಗ್ರಾಮಸಡಕ್ ಯೋಜನೆಯಲ್ಲಿ ಶೃಂಗೇರಿ ಕ್ಷೇತ್ರಕ್ಕೆ 15 ರಸ್ತೆ ಮಂಜೂರಾಗಿದ್ದು, ಇದರಲ್ಲಿ ಎರಡು ಯೋಜನೆಗಳು ಕಾರ್ಯಗತವಾಗಿದ್ದು, ಇನ್ನುಳಿದ ಯೋಜನೆಗಳು ಪೂರ್ಣವಾಗಿಲ್ಲ . ಯೋಜನೆ ವೆಬ್‌ಸೈಟ್‌ಲಾಕ್ ಆಗಿ ಸಮಸ್ಯೆಯಾಗಿದೆ ಎಂಬ ವರದಿ ಬಂದಿದೆ. ಈ ಬಗ್ಗೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹ್ಹಾಣ್ ಅವರನ್ನು ಭೇಟಿ ಮಾಡಿ ಖುದ್ದು ಪತ್ರ ನೀಡಿ ಅಲ್ಲಿ ಏನಾದರೂ ಸಮಸ್ಯೆಯಿದ್ದರೆ ವೆಬ್‌ಸೈಟ್‌ನಲ್ಲಿ ದಾಖಲು ಮಾಡುವಂತೆ ಕೋರಲಾಗಿದೆ. ಪಿಎಂಜಿಎಸ್‌ವೈ ಯೋಜನೆಯ ಟೆಂಡರ್ ಕರೆಯುವಾಗ ರಸ್ತೆ ನಿರ್ಮಾಣ ಹಾಗೂ ಅದರ ನಿರ್ವಹಣೆ ಬಗ್ಗೆ ಕರಾರು ಆಗಿರುತ್ತದೆ. ಟೆಂಡರ್ ಕರೆದಾಗ ಯಾವ ಷರತ್ತುಗಳು ಇದೆಯೋ ಅದನ್ನು ಅದೇ ಗುತ್ತಿಗೆದಾರರು ನಿರ್ವಹಣೆ ಮಾಡಬೇಕಿದೆ. ಹಾಗೆ ಮಾಡದಿದ್ದರೆ ಅಲ್ಲಿನ ಇಂಜಿನಿಯರ್ ಮೇಲೆ ದೂರು ದಾಖಲಾಗುತ್ತದೆ ಮತ್ತು ಆ ಗುತ್ತಿಗೆದಾರರ ಡಿಪಾಸಿಟ್ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದರು.
ಸುರಂಗ ಮಾರ್ಗ ಆದ ಕಡೆಗಳೆಲ್ಲಾ ವಯನಾಡು ಆಗುತ್ತದೆ ಎಂಬ ಭಾವನೆ ತಪ್ಪು. ಸಂಸದ ಬಿ.ವೈ.ರಾಘವೇಂದ್ರ ಅವರು ಸುರಂಗ ಮಾರ್ಗ ಮಾಡುವ ಜತೆಗೆ ಅದಕ್ಕೆ ರೈಲ್ವೇ ಹಳಿಯನ್ನು ಜೋಡಿಸಿ ವ್ಯವಸ್ಥಿತವಾಗಿ ಮಾಡಬೇಕು ಎಂಬ ಪ್ರಸ್ತಾಪ ಇಟ್ಟಿದ್ದಾರೆ ಎಂದು ಕೋಟಾ ಶ್ರೀನಿವಾಸಪೂಜಾರಿ ತಿಳಿಸಿದರು. ಆಗುಂಬೆ ಘಾಟಿ ರಸ್ತೆ ಸುಮಾರು 6.5 ಮೀಟರ್ ಅಗಲವಿದ್ದು, ಅದಕ್ಕೆ 9.5 ಮೀಟರ್‌ಅಗಲ ಮಾಡಬೇಕು ಎಂಬ ಪ್ರಸ್ತಾಪವನ್ನು ನಾನು ಕೊಟ್ಟಿದ್ದು, ಸುರಂಗ ಮಾರ್ಗವನ್ನೂ ಕೂಡ ಕಾಯ್ದಿರಿಸಿಕೊಂಡು ತುರ್ತಾಗಿ ಇದನ್ನು ಅಗಲೀಕರಣ ಮಾಡುವುದರಿಂದ ವಾಹನ ಸಂಚಾರದ ಒತ್ತಡ ಕಡಿಮೆಯಾಗಬಹುದು ಎಂಬ ಅನಿಸಿಕೆಯಿದೆ. ಯಾವ ರೀತಿ ಸುರಂಗ ಮಾರ್ಗ ಮಾಡಬೇಕು. ಜರಿತವಾಗುವ ಸಂಭವವಿದೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಿಕೊಂಡು ಸುರಂಗ ಮಾರ್ಗ ಮಾಡಲಾಗುವುದು. ಮಳೆಗಾಲದಲ್ಲಿ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net