ಜೆಸಿಬಿಎಂ ಕಾಲೇಜಿನ ಆವರಣದಲ್ಲಿ ವಿಜ್ಞಾನ ಕೇಂದ್ರ

ಶೃಂಗೇರಿಯಲ್ಲಿ ನಿರ್ಮಾಣವಾಗಲಿರುವ ವಿಜ್ಞಾನ ಕೇಂದ್ರದ ಮಾದರಿ ಚಿತ್ರ.
ಶೃಂಗೇರಿಯಲ್ಲಿ ನಿರ್ಮಾಣವಾಗಲಿರುವ ವಿಜ್ಞಾನ ಕೇಂದ್ರದ ಮಾದರಿ ಚಿತ್ರ.
Published on
ಶೃಂಗೇರಿ: ಮಲೆನಾಡು ಪ್ರದೇಶದ ಶಾಲಾ ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಜೆಸಿಬಿಎಂ ಕಾಲೇಜಿನ ಆವರಣದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಯಾಗಲಿದೆ.
ಜೆಸಿಬಿಎಂ ಕಾಲೇಜಿನ ಸಮೀಪ ಈಗಾಗಲೇ ಸ್ಥಳ ಗುರುತಿಸಿದ್ದು, ಆರಂಭಿಕ ಪ್ರಕ್ರಿಯೆ ಭರದಿಂದ ನಡೆದಿದೆ. ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕುಲಪತಿ ಡಾ. ಬಿ.ಎನ್.ಸುರೇಶ್ ವಿಜ್ಞಾನ ಕೇಂದ್ರ ಸ್ಥಾಪಿಸಲು ಮುಂದಾಗಿದ್ದಾರೆ. ಈ ಬಗ್ಗೆ ಶ್ರೀಮಠದ ಉಭಯ ಶ್ರೀಗಳ ಅನುಗ್ರಹ ಪಡೆದಿದ್ದಾರೆ. ವಿಜ್ಞಾನ ಕೇಂದ್ರ ಸ್ಥಾಪಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಶ್ರೀಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಭರವಸೆ ನೀಡಿದ್ದಾರೆ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು 2009ರಲ್ಲಿ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಿದ್ದರು. ಭೂಮಿ ಮತ್ತು ಅರ್ಥಿಕ ಸಹಾಯದ ವಿಷಯದಲ್ಲಿ ಇದುವರೆಗೂ ಅಡೆತಡೆಯಾಗಿತ್ತು. ಅತ್ಯುತ್ತಮ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರದ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗಿತ್ತು. ಇದನ್ನು ಪ್ರಮುಖ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಶ್ಲಾಸಿ ಕೇಂದ್ರಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದರು. 
ಇದೀಗ ಮಲೆನಾಡು ಭಾಗದಲ್ಲಿ ಶೃಂಗೇರಿ ವಿಜ್ಞಾನ ಕೇಂದ್ರ ಅಸ್ತಿತ್ವಕ್ಕೆ ಬರಲಿದ್ದು 3 ಎಕರೆ 20 ಗುಂಟೆ ಜಮೀನು ನೀಡಲು ರಾಜ್ಯ ಸರ್ಕಾರಕ್ಕೆೆ ವಿನಂತಿಸಲಾಗಿದೆ. ಗುತ್ತಿಗೆ ಆಧಾರದ ಮೇಲಿರುವ ಭೂಮಿಯನ್ನು ಕಾಲೇಜಿನ ಆಡಳಿತವು ಈಗಾಗಲೇ ಸಂಬಂಧಿಸಿದ ಇಲಾಖೆಗೆ ಅನುಮೋದನೆಗಾಗಿ ಪತ್ರ ಕಳುಹಿಸಿದೆ. ಇಲಾಖಾ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ಸೂಚಿಸಿದ್ದಾರೆ. ಆದರೆ ಅಂತಿಮ ಆದೇಶ ಬರಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net