ಸರ್ವೆ ನಂಬರ್ 392ರಲ್ಲಿ ಒಟ್ಟು 6 ಎಕರೆ 11 ಗುಂಟೆ ಜಮೀನಿದ್ದು, ಅದರಲ್ಲಿ ತಮ್ಮ ಕುಟುಂಬಗಳು ಹಲವು ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಭಾಗವನ್ನು ಇತರರ ಹೆಸರಿಗೆ ಮಂಜೂರು ಮಾಡಲಾಗಿದೆ. ಇದರಿಂದ ತಾವು ಸಾಗುವಳಿ ಮಾಡುತ್ತಿದ್ದ ಜಮೀನು ಉಳ್ಳವರ ಪಾಲಾಗಿ, ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ ಎಂದು ಯಶೋದಮ್ಮ ಮತ್ತು ಜಯಮ್ಮ ಆರೋಪಿಸಿದರು.
ಮಳೆಯನ್ನೂ ಲೆಕ್ಕಿಸದೆ ಛತ್ರಿ ಹಿಡಿದು ಪ್ರತಿಭಟನೆ ನಡೆಸಿದ ವೃದ್ಧೆಯರು, “ನಮ್ಮ ತೋಟವನ್ನು ನಮಗೆ ಬಿಟ್ಟುಕೊಡಿ. ಇಲ್ಲವೇ ದಯಾಮರಣಕ್ಕೆ ಅವಕಾಶ ನೀಡಿ” ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
82 ವರ್ಷದ ಯಶೋದಮ್ಮ ಮಾತನಾಡಿ, “ನಮ್ಮ ಮಾವನವರ ಕಾಲದಿಂದಲೂ ಸರ್ವೆ ನಂಬರ್ 392ರ ಸರ್ಕಾರಿ ಜಮೀನನ್ನು ಉತ್ತಿ, ಬಿತ್ತಿ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಸುಮಾರು ನೂರು ವರ್ಷಗಳಿಂದ ನಮ್ಮ ಕುಟುಂಬ ಈ ಜಮೀನನ್ನು ಅವಲಂಬಿಸಿದೆ. ಆದರೆ ಇದೀಗ ನಾವು ಉಳುಮೆ ಮಾಡಿಕೊಂಡು ಬರುತ್ತಿದ್ದ ಜಮೀನನ್ನು ಮತ್ತೊಬ್ಬರ ಹೆಸರಿಗೆ ಮಾಡಲಾಗಿದೆ. ಈ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದರೂ ಸಮರ್ಪಕ ಸ್ಪಂದನೆ ದೊರೆತಿಲ್ಲ” ಎಂದು ಅಳಲು ತೋಡಿಕೊಂಡರು.
“ನಮಗೆ ಓದು ಬರಹ ಬರುವುದಿಲ್ಲ. ಕೋರ್ಟ್-ಕಚೇರಿ ವ್ಯವಹಾರಗಳ ಪರಿಚಯವೂ ಇಲ್ಲ. ಹಣಕಾಸಿನ ಸಮಸ್ಯೆಯಿಂದ ಕಾನೂನು ಹೋರಾಟ ನಡೆಸಲು ಸಾಧ್ಯವಾಗುತ್ತಿಲ್ಲ. ಜಮೀನು ಕಳೆದುಕೊಂಡ ಬಳಿಕ ಗಂಜಿಗೂ ಗತಿಯಿಲ್ಲದ ಪರಿಸ್ಥಿತಿ ಎದುರಾಗಿದೆ. ಅಕ್ಕಪಕ್ಕದ ತೋಟಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇವೆ” ಎಂದು ಅವರು ಕಣ್ಣೀರಿಟ್ಟರು.
ತಮ್ಮ ಕುಟುಂಬದ ಸದಸ್ಯರೊಬ್ಬರ ಸಾವಿಗೆ ಕಾರಣನಾದ ವ್ಯಕ್ತಿಯೊಬ್ಬ ಜೈಲಿನಲ್ಲಿದ್ದರೂ, ತಾವು ಸಾಗುವಳಿ ಮಾಡುತ್ತಿದ್ದ ಜಮೀನು ಆತನ ಹೆಸರಿಗೆ ಆಗಿರುವುದು ಹೇಗೆ ಎಂಬುದರ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಜಿಲ್ಲಾಧಿಕಾರಿಗಳೇ ನಮಗೆ ನ್ಯಾಯಾಧೀಶರು. ನಮ್ಮ ಸಮಸ್ಯೆಯನ್ನು ಪರಿಶೀಲಿಸಿ, ನಮ್ಮ ಕುಟುಂಬಗಳು ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನನ್ನು ಮರಳಿ ನೀಡಬೇಕು. ಇಲ್ಲವಾದಲ್ಲಿ ನಮಗೆ ದಯಾಮರಣವನ್ನಾದರೂ ದಯಪಾಲಿಸಬೇಕು” ಎಂದು ವೃದ್ಧೆಯರು ಮನವಿ ಮಾಡಿದರು.
ಜಮೀನು ಕಳೆದುಕೊಂಡಿರುವ ಕುಟುಂಬಗಳ ಸಮಸ್ಯೆಯನ್ನು ಜಿಲ್ಲಾಡಳಿತ ತಕ್ಷಣ ಪರಿಶೀಲಿಸಿ, ದಾಖಲೆಗಳನ್ನು ಮರುಪರಿಶೀಲಿಸಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.