ಮಕ್ಕಳಲ್ಲಿ ಸಂಸ್ಕಾರಗಳನ್ನು ಬೆಳೆಸಿ ಒಳ್ಳೆಯ ಸಮಾಜ ನಿರ್ಮಿಸುವ ಉದ್ದೇಶ
ಶೃಂಗೇರಿ ಶ್ರೀ ಶಂಕರಮಠದ ಪ್ರವಚನ ಮಂದಿರದಲ್ಲಿ ಮೇ 4ರಿಂದ 10ರವರೆಗೆ ಸಂಸ್ಕಾರ ಸುಧಾ ಬೇಸಿಗೆ ಶಿಬಿರ
ಚಿಕ್ಕಮಗಳೂರು:ಮಕ್ಕಳಲ್ಲಿ ಸಂಸ್ಕಾರಗಳನ್ನು ಬೆಳೆಸಿ ಒಳ್ಳೆಯ ಸಮಾಜ ನಿರ್ಮಿಸುವ ಉದ್ದೇಶದಿಂದ ಶೃಂಗೇರಿ ಮಠದ ಆಶ್ರಯದಲ್ಲಿ ಶ್ರೀಶಂಕರ ತತ್ವ ಅಭಿಯಾನದ ವತಿಯಿಂದ ಚಿಕ್ಕಮಗಳೂರು ಬಸವನಹಳ್ಳಿಯ ಶೃಂಗೇರಿ ಶ್ರೀ ಶಂಕರಮಠದ ಪ್ರವಚನ ಮಂದಿರದಲ್ಲಿ ಮೇ 4ರಿಂದ 10ರವರೆಗೆ ಸಂಸ್ಕಾರ ಸುಧಾ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದ ಜಿಲ್ಲಾ ಸಂಚಾಲಕ ನಾಯಕ್ ಸಚ್ಚಿದಾನಂದ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಮಧ್ಯಾಹ್ನ 4 ಗಂಟೆಯಿಂದ ಸಂಜೆ 7.30ರವರೆಗೆ ಶಿಬಿರ ನಡೆಯಲಿದೆ. 10ರಿಂದ 16 ವರ್ಷದೊಳಗಿನ ಎಲ್ಲ ಸಮುದಾಯದ ಮಕ್ಕಳು ಲಿಂಗಬೇಧವಿಲ್ಲದೆ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು ವಿವರಿಸಿದರು.
ಶಿಬಿರ ಸಂಪೂರ್ಣ ಉಚಿತವಾಗಿದ್ದು, ಸರಳ ನಿತ್ಯ ಪೂಜಾ ವಿಧಿಯ ತರಬೇತಿ, ನಮ್ಮ ಭಾರತೀಯ ಇತಿಹಾಸದ ಪರಿಚಯ, ಧರ್ಮ ಹಾಗೂ ಸಂಸ್ಕೃತಿಯ ಪರಿಚಯ, ಸಂಸ್ಕೃತ ಭಾಷೆಯ ಮೂಲಭೂತ ಪಾಠಗಳು, ಆಟಗಳು, ವ್ಯಕ್ತಿತ್ವ ಅಭಿವೃದ್ಧಿ ಚಟುವಟಿಕೆಗಳು, ಭಕ್ತಿಗೀತೆಗಳ ತರಬೇತಿ ಈ ಶಿಬಿರದ ಪಠ್ಯವಾಗಿದೆ ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಸರ್ಟಿಫಿಕೇಟ್ ಮತ್ತು ಕ್ಯಾಂಪ್ ಕಿಟ್ ವಿತರಿಸಲಾಗುತ್ತಿದೆ. ಆಸಕ್ತ ಮಕ್ಕಳ ಪಾಲಕರು ಶಂಕರತತ್ವ ಪ್ರಸಾರ ಅಭಿಯಾನದ ಮುಖಂಡರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಈಗಾಗಲೇ 30ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸಹ ಸಂಚಾಲಕ ಎಸ್.ಜಿ.ನಾಗರಾಜ್, ಕಲ್ಕಟ್ಟೆ ಪುಸ್ತಕ ಮನೆಯ ವ್ಯವಸ್ಥಾಪಕಿ ರೇಖಾ ನಾಗರಾಜರಾವ್ ಉಪಸ್ಥಿತರಿದ್ದರು.