ರಸ್ತೆ ಅಭಿವೃದ್ಧಿಗೆ 50 ಕೋಟಿ ರೂ.

ಟಿ.ಡಿ.ರಾಜೇಗೌಡ
ಟಿ.ಡಿ.ರಾಜೇಗೌಡ
Published on
ಎನ್.ಆರ್.ಪುರ: ಚಿಕ್ಕಮಗಳೂರು ಹಳೇ ರಸ್ತೆ ಅಭಿವೃದ್ಧಿಗೆ ಸರ್ಕಾರ ಒಪ್ಪಿಗೆ ನೀಡಿದ್ದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ 50 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್.ಆರ್.ಪುರಕ್ಕೆ ಬಂದಿದ್ದಾಗ ಚಿಕ್ಕಮಗಳೂರು ಹಳೇ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದ್ದೆ. ಆ ರಸ್ತೆಯು ಪುರಾತನ ರಸ್ತೆಯಾಗಿದ್ದು ಲೋಕೋಪಯೋಗಿ ಇಲಾಖೆಗೆ ಸೇರಿದೆ. ಭದ್ರಾ ಹಿನ್ನೀರು ನಿಂತಿರುವುದರಿಂದ ರಸ್ತೆ ಸಂಪರ್ಕ ನಿಂತು ಹೋಗಿತ್ತು. ಕೂಸ್ಗಲ್ ಸಮೀಪದ ಭದ್ರಾ ಹಿನ್ನೀರಿಗೆ ಸೇತುವೆ ನಿರ್ಮಿಸಿದರೆ ಚಿಕ್ಕಮಗಳೂರಿಗೆ ಹೋಗಲು ಹತ್ತಿರವಾಗಲಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕಾಮಗಾರಿ ನಡೆಸಲು ಸೂಚನೆ ನೀಡಿದ್ದಾರೆ. 
ಕಾಫಿ ಬೆಳೆಗಾರರು ಒತ್ತುವರಿ ಮಾಡಿ ಕಾಫಿ ಬೆಳೆದ ಜಮೀನನ್ನು ಮಾಲೀಕರಿಗೆ ಲೀಜ್ ಮೇಲೆ ನೀಡುವ ಬಗ್ಗೆ ಕಂದಾಯ ಇಲಾಖೆಯಲ್ಲಿ ತಿದ್ದುಪಡಿ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಈ ಹಿಂದೆ ಫಾರಮ್ ನಂ.57ರಲ್ಲಿ ಕಾಫಿ ಬೆಳೆಗಾರರು ಅರ್ಜಿ ಸಲ್ಲಿಸಿದ್ದರೂ ಮಂಜೂರು ಮಾಡಲು ಈಗಿನ ಕಾನೂನಿನಂತೆ ಸಾಧ್ಯವಾಗಿಲ್ಲ. ನಮ್ಮ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ಅರಣ್ಯ ಹಾಗೂ ಕಂದಾಯ ಭೂಮಿಯ ಗಡಿ ಗುರುತಿಸಲು ಜಂಟಿ ಸರ್ವೇ ಕಾರ್ಯ ನಡೆಯುತ್ತಿದೆ. ಸರ್ವೇ ಆದ ನಂತರ ಮೀಸಲು ಅರಣ್ಯ ಬಿಟ್ಟು ಉಳಿದ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕು ನೀಡಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net