ಕಾಫಿ ನಾಡಿನ ಚಿಕ್ಕಮಗಳೂರು ನಗರ ಸಭೆಯಲ್ಲಿ ಇದೆ ಮೊದಲ ಬಾರಿಗೆ 156.16 ಕೋಟಿ ರೂ. ಮೊತ್ತದ ಬಜೆಟ್ ಮಂಡನೆ ಮಾಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 156.16 ಕೋಟಿ ರೂ ಆದಾಯ ನಿರೀಕ್ಷಿಸಲಾಗಿದ್ದು, 153.55 ಕೋಟಿ ರೂ ವೆಚ್ಚವನ್ನು ಅಂದಾಜಿಸಲಾಗಿದೆ. ಹೀಗಾಗಿ 2.61 ಕೋಟಿ ರೂ. ಉಳಿತಾಯ ಬಜೆಟ್ಟನ್ನು ನಗರಸಭೆ ಅಧ್ಯಕ್ಷ ಶೀಲಾ ದಿನೇಶ್ ಮಂಡನೆ ಮಾಡಿದರು.
ಚಿಕ್ಕಮಗಳೂರು:ಕಾಫಿ ನಾಡಿನ ಚಿಕ್ಕಮಗಳೂರು ನಗರಸಭೆಯಲ್ಲಿ ಇದೆ ಮೊದಲ ಬಾರಿಗೆ 156.16 ಕೋಟಿ ರೂ. ಮೊತ್ತದ ಬಜೆಟ್ ಮಂಡನೆ ಮಾಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 156.16 ಕೋಟಿ ರೂ ಆದಾಯ ನಿರೀಕ್ಷಿಸಲಾಗಿದ್ದು, 153.55 ಕೋಟಿ ರೂ ವೆಚ್ಚವನ್ನು ಅಂದಾಜಿಸಲಾಗಿದೆ. ಹೀಗಾಗಿ 2.61 ಕೋಟಿ ರೂ. ಉಳಿತಾಯ ಬಜೆಟ್ಟನ್ನು ನಗರಸಭೆ ಅಧ್ಯಕ್ಷ ಶೀಲಾ ದಿನೇಶ್ ಮಂಡನೆ ಮಾಡಿದರು.
ನಗರ ಸಭೆಯ ಸಭಾಂಗಣದಲ್ಲಿ ಗುರುವಾರ ನಡೆದ ನಗರಸಭೆ ಆಯವ್ಯಯ ಸಭೆಯಲ್ಲಿ ಬಜೆಟ್ ಮಂಡನೆ ಮಾಡಿದ ಶೀಲಾ ದಿನೇಶ್ ಪ್ರಸಕ್ತ ಸಾಲಿನ ಆಯವ್ಯಯಕ್ಕೆ ಅನುಮೋದನೆ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು. ಈ ವೇಳೆ ಎಲ್ಲ ಸದಸ್ಯರು ಸರ್ವಾನುಮತದಿಂದ ಬಜೆಟ್ ಗೆ ಅನುಮೋದನೆ ನೀಡಿದರು.
ಈ ವೇಳೆ ಮಾತನಾಡಿದ ಶೀಲಾ ದಿನೇಶ್, ನಗರಸಭೆ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ನಕ್ಷ ಯೋಜನೆಯಡಿ ಸರ್ವೆ ನಡೆಸಲಾಗುತ್ತಿದೆ. ಸರ್ವೆ ಪೂರ್ಣಗೊಂಡ ಬಳಿಕ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣ ಗೊಳಿಸಲಾಗುವುದು. ಆಗ ನಗರ ಸಭೆಗೆ ಬರುವ ಆಸ್ತಿ ತೆರಿಗೆ ಶೇಕಡ 50ರಷ್ಟು ಹೆಚ್ಚಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇಂದು ನಾಗರಿಕರು ತಮ್ಮ ಮನೆ ಬಾಗಿಲಿನಲ್ಲಿಯೇ ಚಲನ ಪಡೆದು ಯುಪಿಐ ಮೂಲಕ ತೆರಿಗೆ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಕಂದಾಯ ವಸೂಲಾತಿ ಜವಾಬ್ದಾರಿಯನ್ನು ಸ್ಥಳೀಯ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಲಾಗುವುದು ಎಂದು ಹೇಳಿದರು.
ಇದುವರೆಗೆ ನಗರಸಭೆ ವ್ಯಾಪ್ತಿಯಲ್ಲಿ ಕಸದ ಸಂಗ್ರಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಕಳೆದ ಜನವರಿಯಿಂದಲೇ ಕಸ ಸಂಗ್ರಹಣೆ ಜವಾಬ್ದಾರಿಯನ್ನು ನಗರಸಭೆಯೇ ವಹಿಸಿಕೊಂಡಿದೆ. ಕಸ ಸಂಗ್ರಹಣೆ ಶುಲ್ಕ 2.50 ಕೋಟಿ. ರೂ. ವಸೂಲಿಯಾಗುವ ನಿರೀಕ್ಷೆಯಿದೆ. ಕಳೆದ ಆರ್ಥಿಕ ವರ್ಷದಲ್ಲಿ ಹಸಿ ಕಸದಿಂದ 200 ಟನ್ ಸಾವಯವ ಗೊಬ್ಬರ ತಯಾರಿಸಿ 6 ಲಕ್ಷ ರೂ. ಆದಾಯ ಗಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಲಲಿತಾ ನಾಯ್ಕ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜು, ಸದಸ್ಯರಾದ ಟಿ.ರಾಜಶೇಖರ್, ಲಕ್ಷ್ಮಣ್, ಇಂದಿರಾ, ಮುನೀರ್, ಕವಿತಾ ಶೇಖರ್, ಸುಜಾತ ಶಿವಕುಮಾರ್ ಸೇರಿದಂತೆ ಇತರ ಸದಸ್ಯರು ಹಾಗೂ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.