ಒತ್ತುವರಿ ಸಮಸ್ಯೆ ಸರಿಪಡಿಸಲು ಈಗಾಗಲೇ ಜಿಲ್ಲಾ ಹಂತದಲ್ಲಿ ಅಧಿಕಾರಿಗಳ ಟಾಸ್ಕ್‌ಪೋರ್ಸ್ ಸಮಿತಿ ರಚನೆಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಸರ್ಕಾರದ ಹಂತದಲ್ಲಿ ಮಲೆನಾಡು ಭಾಗದ ಒಬ್ಬ ಶಾಸಕರನ್ನು ಸಮಿತಿಗೆ ಸದಸ್ಯರನ್ನಾಗಿ ತೆಗೆದುಕೊಳ್ಳುವಂತೆ ಒತ್ತಾಯ ಮಾಡಲಾಗಿದೆ. ಜಿಲ್ಲಾ ಹಂತದಲ್ಲಿ ಶಾಸಕರನ್ನು ಸಮಿತಿಗೆ ತೆಗೆದುಕೊಳ್ಳಲು ಒತ್ತಾಯಿಸಲಾಗಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ನಮಗೆ ಮನವರಿಕೆ ಮಾಡಿಕೊಟ್ಟಿದ್ದು, ನಿಪಕ್ಷಪಾತವಾಗಿ ಸಮಿತಿಯಲ್ಲಿ ತೀರ್ಮಾನಗಳು ಆಗಬೇಕು. ಯಾರಿಗೂ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಅಧಿಕಾರಿಗಳ ಟಾಸ್ಕ್‌ಪೋರ್ಸ್ ಸಮಿತಿ ರಚನೆಯಾಗಿದೆ. ರಾಜ್ಯ ಸಮಿತಿಯಲ್ಲಿ ಅರಣ್ಯ ಸಚಿವರು, ಕಂದಾಯ ಸಚಿವರು, ಕಂದಾಯ ಕಾರ್ಯದರ್ಶಿ ಮುಂತಾದವರು ಇರಬಹುದು. ಈ ಸಮಿತಿ ಈಗಾಗಲೇ ರಚನೆಯಾಗುತ್ತಿದೆ. ಇದರಲ್ಲಿ ಪೂರಕವಾಗಿ ಕೆಲಸವಾಗಿ, ಬಹಳ ಹಿಂದೆ ಒತ್ತುವರಿ ಮಾಡಿರುವವರಿಗೆ ಹಕ್ಕುಪತ್ರ ಕೊಡುವ ಕಾರ್ಯ ನಡೆಯಲಿದೆ ಎಂಬ ಭರವಸೆ ಇದೆ ಎಂದರು.